ಜಿಲ್ಲೆ

ಜಯಂತಿಗಳು ಆಚರಣೆಗೆ ಸೀಮಿತವಾಗದಿರಲಿ

Davangere - Prakash Arali

ಹೊನ್ನಾಳಿ: ಸಮಾಜ ಸುಧಾರಕರು, ತತ್ವಜ್ಞಾನಿಗಳು ಹಾಗೂ ಮಹಾತ್ಮರನ್ನು ಒಂದೇ ಜಾತಿಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಸಂಗತಿ ಎಂದು ಶಾಸಕ ಶಾಂತನಗೌಡ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಕರ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ವತಿಯಿಂದ ಒಟ್ಟು 33 ಮಹಾತ್ಮರ ದಿನಾಚರಣೆ ಆಚರಿಸಲಾಗುತ್ತಿದ್ದು, ಮಹಾತ್ಮರು ನಡೆದು ಹೋದ ದಾರಿಯಲ್ಲಿ ನಾವು ಸಾಗಬೇಕು ಎನ್ನುವುದೇ ಆಚರಣೆಯ ಮುಖ್ಯ ಉದ್ದೇಶ ಎಂದರು.
ಶಿಲ್ಪಕಲೆಗೆ ಹೆಚ್ಚು ಒತ್ತು ಕೊಟ್ಟಿರುವ ಸಮಾಜ ಎಂದರೆ ಅದು ವಿಶ್ವಕರ್ಮ ಸಮಾಜ ಎಂದ ಅವರು, ಶಿಲೆಗೆ ಉತ್ತಮ ಕಲೆ ನೀಡಿ ಸೃಜನಾತ್ಮಕ ಅಂಶಗಳನ್ನು ಮೂರ್ತಿಗೆ ನೀಡುವ ಕಲೆ ವಿಶ್ವಕರ್ಮ ಸಮಾಜಕ್ಕೆ ಕರಗತವಾಗಿದೆ ಎಂದು ಹೇಳಿದರು.
ಸಮಾಜದಲ್ಲಿ ಯಾರೂ ಅಲ್ಪಸಂಖ್ಯಾತರೆಂದು ಭಾವಿಸಬಾರದು. ಎಲ್ಲರೂ ಅವರವರ ಕೆಲಸ ಕಾರ್ಯಗಳಿಗನುಗುಣವಾಗಿ ದೊಡ್ಡವರಾಗುತ್ತಾರೆ ಇದಕ್ಕೆ ವಿಶ್ವಕರ್ಮ ಎಂಬ ಯೋಗಿ ನಿದರ್ಶನ ಎಂದು ಹೇಳಿದರು.
ತಹಸೀಲ್ದಾರ್ ಪುಟ್ಟರಾಜಗೌಡ ಮಾತನಾಡಿ, ವಿಶ್ವಕರ್ಮರು ಸೃಷ್ಟಿಕರ್ತರು, ಹೃದಯ ಶ್ರೀಮಂತಿಕೆ ಹೊಂದಿರುವ ಯಾವುದಾದರೂ ಸಮಾಜ ಇದ್ದರೆ ಅದು ವಿಶ್ವಕರ್ಮ ಸಮಾಜ ಎಂದು ಹೇಳಿದರು.
ಶಿಲೆಯಲ್ಲಿ ಶಿಲ್ಪಕಲೆ ಒಡಮೂಡಿಸಿ ಜೀವ ತುಂಬುವ ಕೆಲಸವನ್ನು ವಿಶ್ವಕರ್ಮ ಸಮಾಜ ಮಾಡುತ್ತಿದ್ದು, ಒಂದು ರೀತಿಯಲ್ಲಿ ಎಲ್ಲ ಸಮಾಜಕ್ಕೆ ಉತ್ತಮ ಮೇಲ್ಪಂಕ್ತಿಯನ್ನು ವಿಶ್ವಕರ್ಮ ಸಮಾಜ ಹಾಕಿದೆ ಎಂದರು.
ಸಮಾಜದ ಮುಖಂಡ ಚಿದಾನಂದಮೂರ್ತಿ, ಪ್ರಕಾಶಾಚಾರಿ, ರುದ್ರಾಚಾರಿ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಕಂದಾಯ ಸಿರಸ್ತೇದಾರ ರವಿ ನಿರೂಪಿಸಿದರು.