ಜಿಲ್ಲೆ

ಜನಪರ ಕೆಲಸಗಳಿಗೆ ಜುಬಿಲೆಂಟ್ ಸಂಸ್ಥೆ ಸಹಕಾರಿ

ಕಿರಣ್ ಗೌಡ.ಜಿ

ನಂಜನಗೂಡು: ಜನಪರ ಕಾಳಜಿಯುಳ್ಳ ಜುಬಿಲೆಂಟ್ ಭಾರ್ತಿಯಾ ಫೌಂಡೇಷನ್ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಬಣ್ಣಿಸಿದರು.

ನಂಜನಗೂಡು ತಾಲೂಕಿನ ಕತ್ವಾಡಿಪುರ ಗ್ರಾಮದಲ್ಲಿ ದೇಬೂರು ಗ್ರಾ.ಪಂ ಮತ್ತು ಜುಬಿಲೆಂಟ್ ಭಾರ್ತಿಯಾ ಫೌಂಡೇಷನ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮತ್ತು ಚಾಮಲಾಪುರದ ಹುಂಡಿಯ ಎನ್.ಜಿ.ಒ ಕಾಲನಿಯಲ್ಲಿ ನಂಜನಗೂಡು ನಗರಸಭೆ ಮತ್ತು ಜುಬಿಲೆಂಟ್ ಭಾರ್ತಿಯಾ ಫೌಂಡೇಷನ್ ವತಿಯಿಂದ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಶುಕ್ರವಾರ ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿ ಮಾತನಾಡಿದರು.

ಜುಬಿಲೆಂಟ್ ಸಂಸ್ಥೆ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸುಮಾರು 8 ಲಕ್ಷ ರೂ. ವೆಚ್ಚಗಳ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದ್ದಾರೆ. 5 ರೂಪಾಯಿ ಕಾಯಿನ್ ಹಾಕಿ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಪಡೆದುಕೊಳ್ಳಬಹುದು. ಜುಬಿಲೆಂಟ್ ಭಾರ್ತಿಯಾ ಫೌಂಡೇಷನ್ ಸಿ.ಆರ್.ಎಸ್ ಅನುದಾನದಲ್ಲಿ ವಿವಿಧ ಜನಪರ ಕೆಲಸ ಕಾರ್ಯಗಳನ್ನು ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಅವರ ಕೆಲಸಗಳು ಶ್ಲಾಘನೀಯ. ಸರ್ಕಾರಿ ಶಾಲಾ ಕಟ್ಟಡಗಳನ್ನು ಕಟ್ಟಿ ಮಾದರಿಯಾಗಿದೆ ಎಂದರು.

ಇದೇ ವೇಳೆ ಚಾಮಲಾಪುರದ ಹುಂಡಿ ಮತ್ತು ಕತ್ವಾಡಿಪುರ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಹಂತ ಹಂತವಾಗಿ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ ಶಂಕರ್, ನಗರಸಭಾ ಸದಸ್ಯರಾದ ಸಿದ್ದರಾಜು, ಜುಬಿಲೆಂಟ್ ಫಾರ್ವೋವಾ ಲಿಮಿಟೆಡ್ ಉಪಾಧ್ಯಕ್ಷರು ಹಾಗೂ ಘಟಕದ ಮುಖ್ಯಸ್ಥರಾದ ಪ್ರಾಣೇಶ್ ಪ್ರಭಾಕರ ಹೊನ್ನಾವಾಡ್, ಜುಬಿಲೆಂಟ್ ಫಾರ್ವೋವಾ ಲಿಮಿಟೆಡ್ ಮಾನವ ಸಂಪನ್ಮೂಲ ವಿಭಾಗದ ಹಿರಿಯ ನಿರ್ದೇಶಕರಾದ ಎ.ಸುಬ್ರಮಣ್ಯ, ಜುಬಿಲೆಂಟ್ ಇನ್‌ಗ್ರೇವಿಯ ಲಿಮಿಟೆಡ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರದೀಪ್ ಕುಮಾರ್, ಹಿರಿಯ ವ್ಯವಸ್ಥಾಪಕರಾದ ಎಸ್. ದೀಪಕ್, ಸಹಾಯಕ ವ್ಯವಸ್ಥಾಪಕರಾದ ಆದರ್ಶ ನಿಧಿ ಜೆ, ಕ್ಷೇತ್ರಾಧಿಕಾರಿ ವಿನಯ್ ರಾಜೇ ಅರಸ್ ಸೇರಿದಂತೆ ಹಲವರು ಇದ್ದರು.