ಚಾಮರಾಜನಗರ: ಉನ್ನತ ವ್ಯಾಸಂಗ ಮಾಡಿ ಅಧಿಕಾರಕ್ಕೇರುವುದಕ್ಕಿಂತಲೂ ಜ್ಞಾನ ಸಂಪಾದನೆ ಮಾಡುವುದೇ ಮುಖ್ಯ ಗುರಿಯಾಗಬೇಕೆಂದು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಹೆಚ್ಚುವರಿ ಆಯುಕ್ತ ಪಿ.ಶಿವರಾಜು ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಬಿ.ಇಡಿ ಕಾಲೇಜು ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗ ಮತ್ತು ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರೋಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪದವಿ ವಿದ್ಯಾರ್ಥಿಗಳು ಐಎಎಸ್ ಮತ್ತು ಕೆಎಎಸ್ ಪರೀಕ್ಷೆ ಬಗ್ಗೆ ತಿಳಿದುಕೊಂಡಿರುತ್ತೀರಾ. ಐಎಎಸ್, ಕೆಎಎಸ್ ಮಾತ್ರವಲ್ಲ ಪಿಎಚ್.ಡಿ ಪದವಿ ಪಡೆಯುವವರೆಗೂ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಬಿಡಿವಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕುವೆಂಪು ಅವರ ಪುಸ್ತಕಗಳನ್ನು ಅಧ್ಯಯನ ಮಾಡಿ ಜೀವನದಲ್ಲಿ ಅದರ ಸಾರವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೈಸೂರು ವಿಶ್ವವಿದ್ಯಾಲಯ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್, ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಕೆ ಸಿ.ಬಸವಣ್ಣ, ಉಪನ್ಯಾಸಕರಾದ ರಾಜು ಜೈನ್, ಯೋಗೇಶ್, ಮಲ್ಲೇಶ್, ಸುರೇಶ್ ಇದ್ದರು.