ಜಿಲ್ಲೆ

ಶಿಕ್ಷಣಕ್ಕೆ ಆದ್ಯತೆ ಸಾಧನೆಗೆ ಪ್ರೇರಣೆ

ಕಲಬುರಗಿ: ಶಿಕ್ಷಿತ ಸಮಾಜದಿಂದ ಮಾತ್ರ ಪ್ರಗತಿ ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು, ಪೋಷಕರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜೆ.ಪಿ.ಎನ್.ಪ್ರತಿಷ್ಠಾನವೂ ಶಿಕ್ಷಣಕ್ಕೆ ಪ್ರೋತ್ಸಾಹಿಸುತ್ತಿದ್ದು, ಸದುಪಯೋಗ ಪಡೆಸಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ಹೇಳಿದರು.

ನಗರದ ರಾಮಮಂದಿರ ವೃತ್ತದ ಸಾಯಿ ಮಂದಿರ ಸಮೀಪದ ಖಾಸಗಿ ಹೊಟೇಲ್‌ನಲ್ಲಿ ಶ್ರೀ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಸೋಮವಾರ ಆಯೋಜಿಸಿದ್ದ ಈಡಿಗ ಸಮಾಜದ ಪದವಿ, ಸ್ನಾತಕೋತ್ತರ ಪದವಿ, ಬಿ.ಇಡಿ ಸೇರಿ ವಿವಿಧ ಪದವಿಯಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈಡಿಗ ಸಮಾಜದಲ್ಲಿ ಕಡು ಬಡತನದಲ್ಲಿ ಇರುವ ಪ್ರತಿಭಾವಂತರಿಗೆ ವಿದ್ಯಾರ್ಥಿ ವೇತನ ನೀಡುವ ಪುಣ್ಯದ ಕಾರ್ಯಗಳನ್ನು ಜೆಪಿಎನ್‌ಪಿ ಮಾಡುತ್ತಿದೆ. ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪರಸ್ಪರ ಸಹಕಾರ, ಶ್ರದ್ಧೆಯಿಂದ ಕೆಲಸ ಮಾಡಿದರೆ ಸಮಾಜದ ಪ್ರಗತಿ ಸಾಧ್ಯ ಎಂದರು.

ಜೆ.ಪಿ.ಎನ್.ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಲ್.ಶಿವಾನಂದ ಮಾತನಾಡಿ, ಮಕ್ಕಳಲ್ಲಿ ಜ್ಞಾನ ಬಿತ್ತುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಬಡತನದ ಕಾರಣಕ್ಕೆ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಭಾವಂತರಿಗೆ ಸದಾ ಪ್ರೋತ್ಸಾಹ ದೊರೆಯಬೇಕು. ಆ ನಿಟ್ಟಿನಲ್ಲಿ ಪ್ರತಿಷ್ಠಾನವೂ ಶಿಕ್ಷಣದ ಜತೆಗೆ ಆರೋಗ್ಯ ಸೇರಿ ವಿವಿಧ ಸೇವಾ ಕಾರ್ಯಗಳನ್ನು ಪ್ರತಿಷ್ಠಾನ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಪ್ರತಿಷ್ಠಾನದ ಮಹಾಪೋಷಕಿ ಲತಾ ಸುಧಾಕರ ಮಾತನಾಡಿ, ವಿದ್ಯಾರ್ಥಿ ಜೀವನವೂ ಅಮೂಲ್ಯವಾಗಿದ್ದು, ಶ್ರಮವಹಿಸಿ ಅಧ್ಯಯನಶೀಲರಾಗಿ ಮುನ್ನಡೆಯಬೇಕು. ಉನ್ನತ ಸ್ಥಾನಗಳನ್ನು ಹೊಂದುವ ಮೂಲಕ ಹೆತ್ತವರ ಮತ್ತು ಹುಟ್ಟಿದ ಸಮಾಜದ ಕೀರ್ತಿಯನ್ನು ತರಬೇಕು. ಕೊಟ್ಟಿರುವ ವಿದ್ಯಾರ್ಥಿ ವೇತನದ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿಷ್ಠಾನದ ಉಪಾಧ್ಯಕ್ಷ ಜಿ.ಮಂಜಪ್ಪ, ಟ್ರಸ್ಟಿ ಎಂ.ಪೂರ್ಣೇಶ, ಉದ್ಯಮಿ ಸತೀಶ ಗುತ್ತೇದಾರ್, ವಿಭಾಗೀಯ ಸಂಚಾಲಕ ಸುರೇಶ ಗುತ್ತೇದಾರ್, ಪ್ರಮುಖರಾದ ಎಂ.ಚೌದರಿ, ರಾಜೇಶ ಗುತ್ತೇದಾರ್, ಶಶಿಧರ ಗುತ್ತೇದಾರ್, ಸಿದ್ಧಾರ್ಥ ಗುತ್ತೇದಾರ್, ಪ್ರಭಾಕರ ಈಳಿಗೇರ, ಆನಂದ ತೆಲಂಗ, ಮಂಜುನಾಥ, ದತ್ತು ಗುತ್ತೇದಾರ್ ನಂದಿಕೂರ ಇತರರಿದ್ದರು. ಆಶಾರಾಣಿ ಗುತ್ತೇದಾರ್, ಸಹನಾ ಜೇವರ್ಗಿ ಪ್ರಾರ್ಥನಾ ಗೀತೆ ಹಾಡಿದರು. ಚಂದ್ರಕಾAತ ಗುತ್ತೇದಾರ್ ನಿರೂಪಣೆ ಮಾಡಿದರು. ಉಮೇಶ ಗುತ್ತೇದಾರ್ ಸ್ವಾಗತಿಸಿದರು. ರೂಪಾ ಗುತ್ತೇದಾರ್ ವಂದಿಸಿದರು.

೧೬೬ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ: ರಾಯಚೂರು, ಯಾದಗಿರಿ, ಕಲಬುರಗಿ, ಬೀದರï, ವಿಜಯಪುರ ಜಿ¯್ಲೆಯ ಪದವಿ, ಸ್ನಾತಕೋತ್ತರ ಪದವಿ, ಬಿ.ಇಡಿ ಸೇರಿ ವಿವಿಧ ಪದವಿಯಲ್ಲಿ ಅಧ್ಯಯನ ನಿರತ ೧೬೬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಚೆಕ್ ವಿತರಿಸಲಾಯಿತು.

ಉನ್ನತ ಶಿಕ್ಷಣ ಪಡೆದು ಐಎಎಸ್, ಕೆಎಎಸ್ ಹುದ್ದೆಗಳಿಗೆ ಏರಬೇಕು. ಉದ್ಯಮಗಳನ್ನು ಸ್ಥಾಪಿಸಿ, ಯಶಸ್ವಿ ಜೀವನ ಸಾಗಿಸಬೇಕು. ಸಮಾಜಕ್ಕೆ ಸಹಾಯ ಮಾಡುವ ಶಕ್ತಿ ಬೆಳೆಸಿಕೊಳ್ಳಬೇಕು. ನಾವು ಯಾವುದೇ ಸ್ಥಾನಕ್ಕೆ ಹೋದರೂ ಮೂಲವನ್ನು ಮರೆಯಬಾರದು. | ಲತಾ ಸುಧಾಕರ ಮಹಾಪೋಷಕಿ ಜೆ.ಪಿ.ಎನ್.ಪ್ರತಿಷ್ಠಾನ