ಮಂಗಳೂರು: ಕ್ರಿಕೆಟ್ ಪಂದ್ಯಾಟ ಹಾಗೂ ಪತ್ರಕರ್ತರ ಮಹಾಸಭೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ 600ಕ್ಕೂ ಅಧಿಕ ಪತ್ರಕರ್ತರು ಆಗಮಿಸುತ್ತಿದ್ದು ಅವರಿಗೆ ಆತಿಥ್ಯ ಸೇರಿದಂತೆ ಯಶಸ್ವಿ ಕ್ರೀಡಾಕೂಟ ಆಯೋಜಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜ.5ರಿಂದ ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕ್ಯಾ. ಪ್ರಾಂಜಲ್ ಗೌರವಾರ್ಥ ನಡೆಯಲಿರುವ ‘ಕೆಯುಡಬ್ಲ್ಯುಜೆ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ ಟ್ರೋಪಿ ಅನಾವರಣ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿಭಿನ್ನತೆಯೇನೆಂದರೆ ಸಾಂಸ್ಕೃತಿಕ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳು ಮುಂದುವರಿದಿದ್ದು, ದೇಶದಲ್ಲಿ ಇಂತಹ ಸ್ವಚ್ಛ, ಸೌಹಾರ್ದತೆಯ ಮತ್ತೊಂದು ನಗರವನ್ನು ಕಾಣಲು ಸಾಧ್ಯವಿಲ್ಲ. ಇಂತಹ ನಾಡಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟ ನಡೆಯುತ್ತಿರುವುದು ಬ್ರ್ಯಾಂಡ್ ಮಂಗಳೂರಿಗೆ ಮತ್ತಷ್ಟು ಪೂರಕ ಎಂದರು.
ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ಕುಟ್ಟಪ್ಪ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.
ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಜಗತ್ತಿನ ಸ್ವರ್ಗ ರೋಹನ್
ಉದ್ಯಮದಲ್ಲಿ ತೊಡಗಿಸಿಕೊಂಡ ನಾವು ದೇಶ-ವಿದೇಶಗಳಲ್ಲಿ ಸುತ್ತಾಡುತ್ತೇವೆ. ಆದರೆ ಕಲೆ, ಸಂಸ್ಕೃತಿ, ಧಾರ್ಮಿಕ ನಂಬಿಕೆ, ಸಹಬಾಳ್ವೆಯಂತಹ ಇಂತಹ ನಗರವನ್ನು ಮತ್ತೊಂದು ಕಡೆ ಕಾಣಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಈ ಜಗತ್ತಿನ ಸ್ವರ್ಗ ಎಂದು ರೋಹನ್ ಕಾರ್ಪೊರೇಷನ್ ಚೇರ್‌ಮೆನ್ ರೋಹನ್ ಮೊಂತೆರೋ ಹೇಳಿದರು.
ಪತ್ರಕರ್ತರ ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆ ನಿಜಕ್ಕೂ ಚೆನ್ನಾಗಿದ್ದು, ಈ ಶೀರ್ಷಿಕೆಯಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಪತ್ರಕರ್ತರು ಬರುವ ಕಾರಣ ಮಂಗಳೂರಿನ ಬ್ರ್ಯಾಂಡ್ ಮತ್ತಷ್ಟು ವ್ಯಾಪ್ತಿಗೆ ಪಸರಿಸಲಿ. ಈ ಕ್ರೀಡಾಕೂಟಕ್ಕೆ ಟೈಟಲ್ ಪ್ರಾಯೋಜಕರಾಗಿ ಭಾಗವಹಿಸುವುದಕ್ಕೆ ನಮಗೂ ಹೆಮ್ಮೆ ಎನಿಸುತ್ತಿದೆ ಎಂದರು.