ಜಿಲ್ಲೆ

ರಾಜಕೀಯ ಸುದ್ದಿಗೆ ಮಹತ್ವ ಬೇಡ: ಉಪಮುಖ್ಯಮಂತ್ರಿ, ಡಾ.ಸಿ.ಎನ್.ಅಶ್ವತ್ಥ ನಾರಾಯಣ

Dakshina Kannada

ಮಂಗಳೂರು: ಮಾಧ್ಯಮಗಳಲ್ಲಿ ಕೇವಲ ರಾಜಕೀಯಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡುವುದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಅದಕ್ಕೆ ಕಡಿಮೆ ಪ್ರಾಶಸ್ತ್ಯ ನೀಡುವಂತೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ 2 ದಿನಗಳ 35ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ವ್ಯವಸ್ಥೆ ಸರಿಯಾಗಿ ನಡೆಯಲು ಮಾಧ್ಯಮಗಳ ಪಾತ್ರ ಪರಿಣಾಮಕಾರಿಯಾದದ್ದು, ಕೇವಲ ರಾಜಕೀಯ ರಂಗುರಂಗಿನ ಹೇಳಿಕೆಗಳನ್ನು ನೀಡುವುದರಿಂದ ಸಮಾಜಕ್ಕೆ ಯಾವ ಉಪಯೋಗವೂ ಆಗುವುದಿಲ್ಲ. ಆದ್ದರಿಂದ ರಾಜಕೀಯ ವಿಚಾರಗಳಿಂದ ಹೊರಬಂದು ಸಮಾಜದ ಇತರ ವ್ಯವಸ್ಥೆಗಳ ಬಗ್ಗೆಯೂ ಆದ್ಯತೆ ನೀಡುವಂತಾಗಬೇಕು ಎಂದರು.

ಜಾಗತೀಕರಣ ಬಂದ ಬಳಿಕ ಎಲ್ಲ ಕ್ಷೇತ್ರಗಳಲ್ಲೂ ಹಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇಂತಹ ಸಂದರ್ಭದಲ್ಲಿ ವೃತ್ತಿಯಲ್ಲಿ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ, ಇಂತಹ ಸವಾಲುಗಳನ್ನು ಮೀರಿ ನಿಂತು ಸ್ವಾಭಿಮಾನದಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಪತ್ರಿಕೋದ್ಯಮವು ವಾಣೀಜ್ಯೀಕರಣಗೊಳ್ಳದೆ ಪ್ರೆಸ್ ಟ್ರಸ್ಟ್ ಕಾಯ್ದೆಗೊಳಪಟ್ಟರೆ ಮಾಧ್ಯಮಗಳು ಮತ್ತು ಪತ್ರಕರ್ತರು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿತ್ತು ಎಂದೂ ಹೇಳಿದರು.

ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ತರಂಗ ವಾರಪತ್ರಿಕೆಯ ಸಂಪಾದಕಿ ಸಂಧ್ಯಾ ಪೈ ಮಾತನಾಡಿ, ಪ್ರತಿವರ್ಷ ಓದುಗರ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಪತ್ರಿಕೆಗಳ ಆಯುಷ್ಯ ಎಷ್ಟಿದೆ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರ ಕಂಡುಕೊಳ್ಳದೆ ಇದ್ದರೆ ಮಾಸಿಕ, ವಾರಪತ್ರಿಕೆಗಳು ಐದಾರು ವರ್ಷದೊಳಗೆ ಹಾಗೂ ದೈನಿಕಗಳು 10-12 ವರ್ಷದೊಳಗೆ ಅಂತ್ಯಕಾಣಬಹುದು ಎಂದರು.

ವ್ಯಂಗ್ಯಚಿತ್ರ ಪ್ರದರ್ಶನವನ್ನು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಪೋಟೋ ಪ್ರದರ್ಶನ ಮತ್ತು ವಸ್ತುಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಯು.ಟಿ. ಖಾದರ್, ವಿಧಾನಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಸಂಗೀತ ನಿರ್ದೇಶಕ ಗುರುಕಿರಣ್, ಏಷ್ಯಾ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸಂಚಾಲಕ ಎಚ್.ಬಿ.ಮದನಗೌಡ, ಮಂಗಳೂರು ಮೇಯರ್ ದಿವಾಕರ ಪಾಂಡೇಶ್ವರ, ಉಪಮೇಯರ್ ವೇದಾವತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ದ.ಕ. ಜಿಲ್ಲಾ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಸಮ್ಮೇಳನ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಮತ್ತಿತರರಿದ್ದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ರವೀಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರಕಟಿಸುವಾಗ ಎಚ್ಚರವಹಿಸಿ: ಜನರು ಈಗ ಮೊದಲಿನಂತಿಲ್ಲ, ಪತ್ರಿಕೆಗಳನ್ನು ಓದುವ ಜತೆಗೆ ವಿವಿಧ ಮಾಧ್ಯಮಗಳಿಂದ ವಿಷಯಗಳನ್ನು ಅರಿತು, ವಿಚಾರ ವಿಮರ್ಶೆ ಮಾಡುವಷ್ಟು ಪ್ರಜ್ಞಾವಂತರಾಗಿದ್ದು ಪತ್ರಕರ್ತರು ವರದಿ ಬರೆಯುವಾಗ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಗೋವು ಏನೇ ತಿಂದರೂ ಶುದ್ಧ ಹಾಲನ್ನೇ ನೀಡುತ್ತದೆ. ಅದೇ ರೀತಿ ಮಾಧ್ಯಮದವರು ಸುದ್ದಿಗಳನ್ನು ಫಿಲ್ಟರ್ ಮಾಡಿ ಒಳ್ಳೆಯದನ್ನು ನೀಡಬೇಕಾಗುತ್ತದೆ. ಮಾಧ್ಯಮ ವರದಿಗಳು ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಗೆ ಪೂರಕವಾಗಿರಲಿ, ಪತ್ರಕರ್ತರು ಎಷ್ಟೇ ಒತ್ತಡವಿದ್ದರೂ ಸಹನೆ ಮತ್ತು ತಾಳ್ಮೆಯಿಂದ ಇದ್ದಲ್ಲಿ ಯಶಸ್ಸು ಸಾಧ್ಯ ಎಂದೂ ಹೇಳಿದರು.

ಪತ್ರಕರ್ತರಲ್ಲಿ ಡಿಜಿಟಲ್ ಕೌಶಲ ಅನಿವಾರ್ಯ: ರವಿ ಹೆಗಡೆ ಸಲಹೆ

ಪ್ರಸ್ತುತ ಕಾಲಘಟ್ಟದಲ್ಲಿ ಊಹಿಸಲೂ ಆಗದಷ್ಟು ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳೇ ಮುಖ್ಯವಾಹಿನಿ ಮಾಧ್ಯಮಗಳಾಗಿ ಹೊರಹೊಮ್ಮುತ್ತಿವೆ. ಇದಕ್ಕೆ ತಕ್ಕುದಾಗಿ ಪತ್ರಕರ್ತರು ಡಿಜಿಟಲ್ ಕೌಶಲ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಕನ್ನಡಪ್ರಭ- ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

‘ಪತ್ರಕರ್ತರ ವೃತ್ತಿ ಸವಾಲು ಮತ್ತು ಸಾಮಾಜಿಕ ಹೊಣೆಗಾರಿಕೆ’ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಕಳೆದ 25 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಆರ್ಥಿಕ ಸಂಕಷ್ಟವನ್ನು ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿವೆ. ಸುದ್ದಿ, ಸಂಪಾದಕೀಯ ಮೌಲ್ಯಕ್ಕಿಂತ ಮಾರುಕಟ್ಟೆ ಮೌಲ್ಯವೇ ಮುಖ್ಯವಾಗಿದೆ. ರಾಜ್ಯದಲ್ಲಿ ಕಳೆದ 2-3 ತಿಂಗಳಲ್ಲಿ 40-50 ಮಂದಿ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ, ಮಾಧ್ಯಮ ಕ್ಷೇತ್ರ ಹೊಸ ವಿಸ್ತಾರತೆಗೆ ತೆರೆದುಕೊಳ್ಳುತ್ತಿರುವಾಗ ಪತ್ರಕರ್ತರೂ ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳಬೇಕಿದೆ ಎಂದು ಹೇಳಿದರು.

ವೃತ್ತಿ ಉಳಿಸಿಕೊಳ್ಳುವ ಸವಾಲು: ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ದೇಶವನ್ನು ಕಾಡುತ್ತಿರುವ ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆ ಇಂದು ಸುದ್ದಿ ಮನೆಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರನ್ನೂ ಕಾಡುತ್ತಿದೆ. ಪತ್ರಕರ್ತ ತನ್ನ ವೃತ್ತಿಯನ್ನು ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದ್ದು, ಈ ಬಗ್ಗೆ ಟ್ರೇಡ್ ಯೂನಿಯನ್ ಅಡಿಯಲ್ಲಿ ನೋಂದಾವಣೆಗೊಂಡಿರುವ ರಾಜ್ಯ ಪತ್ರಕರ್ತರ ಸಂಘ ಧ್ವನಿ ಎತ್ತಬೇಕು ಎಂದು ಹೇಳಿದರು.

ಪತ್ರಕರ್ತರಾದ ನಾ ವಿನಯ್, ಕಂ.ಕ. ಮೂರ್ತಿ, ರವಿಕಾಂತ ಕುಂದಾಪುರ ಮಾತನಾಡಿದರು.

ದ.ಕ. ಜಿಲ್ಲಾ ಪತ್ರಕರ್ತರ ಸಂಘಕ್ಕೆ ಪ್ರಶಸ್ತಿ

ಬ್ರ್ಯಾಂಡ್ ಮಂಗಳೂರು, ಪತ್ರಕರ್ತರ ಗ್ರಾಮ ವಾಸ್ತವ್ಯ ಸೇರಿದಂತೆ ವಿವಿಧ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವನ್ನು ರಾಜ್ಯದ ಮಾದರಿ ಪತ್ರಕರ್ತರ ಸಂಘ ಎಂದು ಗುರುತಿಸಿ ಪ್ರಶಸ್ತಿ ನೀಡಲಾಯಿತು. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಪ್ರಶಸ್ತಿ ಪ್ರದಾನ ಮಾಡಿದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ಪದಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.

ಹರೇಕಳ ಹಾಜಬ್ಬರಿಗೆ ಸನ್ಮಾನ

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ, ಅವರನ್ನು ವರದಿಗಳ ಮೂಲಕ ಪರಿಚಯಿಸಿದ ಗುರುವಪ್ಪ ಎನ್.ಟಿ.ಬಾಳೆಪುಣಿ, ಯೋಗೀಶ್ ಹೊಳ್ಳ, ಗುರುರಾಜ ಪಣಿಯಾಡಿ, ಚಿದಂಬರ ಬೈಕಂಪಾಡಿ ಅವರನ್ನು ಗೌರವಿಸಲಾಯಿತು.

ಪತ್ರಿಕೆ ಹೊತ್ತ ಪಲ್ಲಕಿ ಮೆರವಣಿಗೆ: ನಗರದ ಫುಟ್ಬಾಲ್ ಮೈದಾನದಿಂದ ಪುರಭವನದವರೆಗೆ ಸಮ್ಮೇಳನ ಮೆರವಣಿಗೆ ನಡೆಯಿತು. ಚೆಂಡೆ, ವಾದ್ಯ ಘೋಷದೊಂದಿಗೆ ನಡೆದ ಮೆರವಣಿಗೆಯಲ್ಲಿ ಶನಿವಾರದ ಎಲ್ಲ ಪತ್ರಿಕೆಗಳು ಹಾಗೂ ಟಿವಿ ಮಾಧ್ಯಮಗಳ ಲೋಗೋಗಳನ್ನು ಹೊತ್ತ ಪಲ್ಲಕಿ ಗಮನ ಸೆಳೆಯಿತು. ಪತ್ರಕರ್ತ ವೃತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಪೆನ್ನು, ಪುಸ್ತಕ ಹಾಗೂ ಕ್ಯಾಮರಾವನ್ನು ವೇದಿಕೆಯಲ್ಲಿ ಪ್ರತಿಬಿಂಬಿಸಲಾಯಿತು. ವೇದಿಕೆ ಪಕ್ಕದಲ್ಲಿ ಪತ್ರಿಕೆಗಳ ಕೊಲಾಜ್ ಗಮನ ಸೆಳೆಯಿತು.

ವಿವಿಧ ಮಳಿಗೆಗಳು: ಸಾವಯವ ಉತ್ಪನ್ನ, ಗೃಹೋಪಯೋಗಿ ಉತ್ಪನ್ನಗಳ ವಿವಿಧ ಮಳಿಗೆಗಳು ಸಮ್ಮೇಳನದ ಹೊರ ಭಾಗದಲ್ಲಿದ್ದವು. ಬೆತ್ತದಿಂದ ಮಾಡಿದ ಕುರ್ಚಿ, ವಿವಿಧ ಅಡುಗೆ ಮನೆಯ ಉಪಕರಣಗಳು, ಹಾಗಲಕಾಯಿ ಚಟ್ನಿಪುಡಿ, ಉಪ್ಪಿನಕಾಯಿ, ವಿವಿಧ ಸಾವಯವ ಪೌಡರ್‌ಗಳು ಮಳಿಗೆಗಳಲ್ಲಿದ್ದವು. ಸುರತ್ಕಲ್ ನಿರ್ಮಿತಿ ಕೇಂದ್ರದ ವತಿಯಿಂದ ಮಳೆ ನೀರು ಕೊಯ್ಲು ಪ್ರಾತ್ಯಕ್ಷಿಕೆ ಯನ್ನು ಸಮ್ಮೇಳನ ಸಭಾಂಗಣದ ಹೊರಭಾಗದಲ್ಲಿ ಆಯೋಜಿಸಲಾಗಿದೆ. ಮಳೆ ನೀರು ಕೊಯ್ಲು ಅಳವಡಿಸಿ ಯಶಸ್ವಿಯಾದ ಮನೆಗಳ ಚಿತ್ರಗಳನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

ವ್ಯಂಗಚಿತ್ರ, ಫೋಟೊ ಗ್ಯಾಲರಿ: ಪತ್ರಕರ್ತರ ಸಹಿತ ಖ್ಯಾತ ವ್ಯಂಗ್ಯ ಚಿತ್ರಕಾರರು ಬರೆದ ವ್ಯಂಗ್ಯ ಚಿತ್ರಗಳು ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ದ.ಕ. ಜಿಲ್ಲಾ ಛಾಯಾಚಿತ್ರ ಪತ್ರಕರ್ತರು ತೆಗೆದ ಛಾಯಾಚಿತ್ರಗಳ ಪ್ರದರ್ಶನ ಮಳಿಗೆಗೆ ಪತ್ರಕರ್ತ ದಿ.ನಾಗೇಶ್ ಪಡು ಹೆಸರನ್ನಿಡಲಾಗಿತ್ತು. ಡಾ. ಡಿ.ವೀರೇಂದ್ರ ಹೆಗ್ಗಡೆಯವರು ತೆಗೆದ ಛಾಯಾಚಿತ್ರಗಳೂ ಗಮನ ಸೆಳೆದವು. ಹೊರ ಜಿಲ್ಲೆಗಳ ಛಾಯಾಚಿತ್ರ ಪತ್ರಕರ್ತರ ವಿವಿಧ ಛಾಯಾಚಿತ್ರಗಳು ಆಕರ್ಷಿಸಿದವು. ಎಸ್.ಎಲ್.ಶೇಟ್ ಸಂಸ್ಥೆಯ ಪ್ರಶಾಂತ್ ಶೇಟ್ ಸಂಗ್ರಹದ ಸ್ಟಾಂಪ್, ನಾಣ್ಯ, ಪೋಸ್ಟ್ ಕಾರ್ಡ್ ಪ್ರದರ್ಶನ ಮಳಿಗೆಯೂ ಜನರನ್ನು ಸೆಳೆಯುತ್ತಿದೆ.