ಜಿಲ್ಲೆ

ಬಡ್ಡಿ ರಹಿತ ಸಾಲ ಸೌಲಭ್ಯ ಪತ್ರಕರ್ತರಿಗೆ ಸಿಗಲಿ: ಸಚಿವ ದಿನೇಶ್ ಗುಂಡೂರಾವ್ ಆಶಯ

ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ 4ನೇ ಅಂಗವೆಂದು ಕರೆಯುವ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ದೊರೆಯುವಂತಾಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅರಮನೆ ರಸ್ತೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಮೃತ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಕರ್ತರು ಬದುಕುವುದಕ್ಕೆ ಇಂತಹ ಸಹಕಾರ ಸಂಘ ಅವಶ್ಯಕತೆ ಇದೆ. ಸಂಘವನ್ನು ಇನ್ನಷ್ಟು ಸಧೃಡವನ್ನಾಗಿಸಲು ಸರ್ಕಾರದಿಂದ ಇನ್ನಷ್ಟು ಹೆಚ್ಚಿನ ನೆರವು ಸಿಗಬೇಕಿದೆ. ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ’ ಸೌಲಭ್ಯವು ಮಾನ್ಯತೆ ಪಡೆದ ಪತ್ರಕರ್ತರ ಜೊತೆಗೆ ಎಲ್ಲ ನೈಜ ಪತ್ರಕರ್ತರಿಗೆ ದೊರೆಯುವಂತಾಗಬೇಕು. ಯೋಜನೆಯಲ್ಲಿನ ಕಠಿಣ ಷರತ್ತು ಸಡಿಲಿಸಿ ಸರಳೀಕರಣ ಮಾಡುವಂತೆ ಸಿಎಂ ಜೊತೆ ಚರ್ಚಿಸುವುದಾಗಿ ಸಚಿವರ ಭರವಸೆ ನೀಡಿದರು.

ಪತ್ರಕರ್ತರ ಸಂಘ 75 ವರ್ಷ ಪೂರೈಸಿರುವುದು ದೊಡ್ಡ ಸಾಧನೆಯಾಗಿದೆ.ಪತ್ರಕರ್ತರು ದೇಶ ಕಟ್ಟಲು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂದರ್ಭದಲ್ಲಿ ಗಾಂಧಿ, ತಿಲಕ್ ಸೇರಿ ಅನೇಕ ಪತ್ರಕರ್ತರು ಇದ್ದರು. ಈ ಕ್ಷೇತ್ರವೂ ಪ್ರಜಾಪ್ರಭುತ್ವಕ್ಕೆ ಆಧಾರಸ್ಥಂಭವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದ್ದು, ಬೇರೆ,ಬೇರೆ ವಿಧಾನದಲ್ಲಿ ಜನರಿಗೆ ಸುದ್ದಿ ಮುಟ್ಟಿಸಲಾಗುತ್ತಿದೆ. ಪತ್ರಕರ್ತರ ಬದುಕಿನಲ್ಲಿ ಹಲವು ಸಂಕಷ್ಟಗಳಿವೆ. ಹಿಂದಿನ ಜೀವನಕ್ಕೆ ಹೋಲಿಸಿದರೆ ಈಗಿನ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಾಗಾಗಿ, ಸಾಲ ಸೌಲಭ್ಯ ಸೇರಿ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಪತ್ರಕರ್ತರಿಗೆ ಸಿಗಬೇಕು ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಸಂಘದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಹಲವು ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಮೇಶ್ ಎಂ.ಪಾಳ್ಯ, ಉಪಾಧ್ಯಕ್ಷ ದೊಡ್ಡಬೊಮ್ಮಯ್ಯ, ಖಜಾಂಜಿ ಬಿ.ಎನ್.ಮೋಹನ್‌ಕುಮಾರ್ ಸೇರಿ ಆಡಳಿತ ಮಂಡಳಿ ಸದಸ್ಯರು, ಸಂಘದ ಸಾವಿರಾರು ಸದಸ್ಯರು ಉಪಸ್ಥಿತರಿದ್ದರು.

ಸಂಘದ ಬಹು ಬೇಡಿಕೆ ಸಿಎಂ ಗಮನಕ್ಕೆ .........

ಸಹಕಾರ ವಲಯದಲ್ಲಿ ಪತ್ರಕರ್ತರ ಸಹಕಾರ ಸಂಘ ಪ್ರಮುಖ ಸ್ಥಾನಗಳಿಸಿದೆ. ಸಂಘದಿಂದ ಸಾಕಷ್ಟು ಪತ್ರಕರ್ತರು ಸಹಾಯ ಪಡೆದಿದ್ದಾರೆ. ಸಂಘ ಗಟ್ಟಿಯಾಗಿದ್ದರೆ ಪತ್ರಕರ್ತರು ಗಟ್ಟಿಯಾಗುತ್ತಾರೆ. ಸಾಲ ಪಡೆದವರು ಮರುಪಾವತಿ ಮಾಡಬೇಕು. ಈ ಕ್ರಮದಿಂದ ಸಂಘ ಇನ್ನಷ್ಟು ಸಧೃಡವಾಗಿ ಬೆಳೆಯಲು ಅನುಕೂಲವಾಗುತ್ತದೆ. ಸಂಘದ ಬಹು ಬೇಡಿಕೆಗಳನ್ನು ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದ್ದಾರೆ. ಪತ್ರಕರ್ತರನ್ನು ಕಂಡರೆ ರಾಷ್ಟ್ರೀಯ ಬ್ಯಾಂಕ್‌ಗಳು ಅಸಡ್ಡೆಪಡಲಿವೆ. ದೇಶದಲ್ಲಿ ನೋಟ್ ನಿಷೇಧಿಸಿದ್ದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರನ್ನು ಕಾಪಾಡಿದ್ದೆ ಈ ಸಹಕಾರ ಬ್ಯಾಂಕ್‌ಗಳು. ರಾಜ್ಯದಲ್ಲಿ ಅಂದಾಜು 569 ಪತ್ರಕರ್ತರಿಗೆ ಪಿಂಚಣಿ ಸಿಗುತ್ತಿದೆ. ಆದರೆ, ಕೆಲ ಕಠಿಣ ನಿಯಮದಿಂದ ಪಿಂಚಣಿ ಪಡೆಯಲು ಬಹುತೇಕರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ನಿಯಮ ರಹಿತವಾಗಿ ಪತ್ರಕರ್ತರಿಗೆ ಪಿಂಚಣಿ ಸೌಲಭ್ಯ ಸಿಗುವಂತೆ ಸಿಎಂ ಗಮನಕ್ಕೆ ತಂದು ಬಗೆಹರಿಸುವುದಾಗಿ ಪ್ರಭಾಕರ್ ಹೇಳಿದರು.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು, ದೇಶದಲ್ಲೇ ಪ್ರಥಮ ಸಹಕಾರಿ ಸಂಘವಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟದಲ್ಲಿ ಅತಿ ಹೆಚ್ಚು ಸಹಕಾರ ಸಂಘಗಳಿವೆ. ಸಂಘವನ್ನು ಕಟ್ಟುವುದು ಸುಲಭ. ಆದರೆ, ಅದನ್ನು ಉಳಿಸುವುದು ಕಷ್ಟ. ಪಡೆದ ಸಾಲವನ್ನು ಮರು ಪಾವತಿಸದಿದ್ದರೆ ಸಂಘ ಉಳಿಯಲ್ಲ. ಸಾಲ ವಸೂಲಿಗೆ ಕಟ್ಟುನಿಟ್ಟಿನ ಕ್ರಮವಾಗಲಿ. ಹಿಂದೆ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ನಾನು ಅಧ್ಯಕ್ಷನಾಗಿದ್ದೆ. ನಮ್ಮ ತಂದೆಯೂ ಅಧ್ಯಕ್ಷರಾಗಿದ್ದರು. ಹೆಚ್ಚು ಠೇವಣಿ ಇದ್ದರೆ ಗ್ರಾಹಕರಿಗೆ ಅನುಕೂಲವಾಗುತ್ತದೆ. ಸಂಘದ ಬೇಡಿಕೆ ಈಡೇರಿಸಲು ಸಿದ್ಧವಿದ್ದೇನೆ. ಈ ಸಂಘ ಬೃಹದಾಕಾರವಾಗಿ ಬೆಳೆಯುವಂತಾಗಲಿ.

ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ.

ಪತ್ರಕರ್ತರ ಸಂಘದ ಬೇಡಿಕೆಗಳೇನು?

* ಮಾಧ್ಯಮ ಅಕಾಡೆಮಿ, ಮಾನ್ಯತಾ ಮಾಧ್ಯಮ ಪಟ್ಟಿ ಸಮಿತಿ ಸೇರಿ ಇತರೆ ಸರ್ಕಾರಿ ನಾಮನಿರ್ದೇಶಿತ ಸಂಸ್ಥೆಗಳಲ್ಲಿ ಸಂಘದ ಸದಸ್ಯರೊಬ್ಬರಿಗೆ ಅವಕಾಶ ನೀಡಬೇಕು

* ‘ಸಮುದಾಯ ಮಾಧ್ಯಮ ಭವನ’ ನಿರ್ಮಾಣಕ್ಕೆ ರಿಯಾಯಿತಿ ದರದಲ್ಲಿ ಸಿಎ ನಿವೇಶನ ಒದಗಿಸಿ

* ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ‘ಮಾಧ್ಯಮ ಗ್ರಾಮ’ ನಿರ್ಮಾಣಕ್ಕೆ 10 ಎಕರೆ ಭೂಮಿ ಮಂಜೂರು ಮಾಡಲಿ

* ಪತ್ರಕರ್ತರ ಪಿಂಚಣಿ ಯೋಜನೆಯ ನಿಯಮ ಸರಳೀಕರಣಗೊಳಿಸಿ

* ಸಂಘದ ಉತ್ತೇಜನಕ್ಕೆ ಸರ್ಕಾರದಿಂದ 10 ಕೋಟಿ ರೂ.ಬಡ್ಡಿ ರಹಿತ ಸಾಲ ಸೌಲಭ್ಯ

* ಯಶಸ್ವಿನಿ ಯೋಜನೆಯನ್ನೂ ಸಂಘದ ಸದಸ್ಯರಿಗೂ ವಿಸ್ತರಿಸಿ