ಶಿರಸಿ: ಯುವ ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಗಡಿಬಿಡಿಯಿಂದ ಹೊರ ಬಂದು ಅಧ್ಯಯನಶೀಲತೆ ಅಳವಡಿಸಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು.
ನಗರದ ಪೂಗ ಭವನದಲ್ಲಿ ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೋದ್ಯಮ ಬೆಳವಣಿಗೆಗೆ ಅನೇಕ ಹಿರಿಯರು ಶ್ರಮಿಸಿದ್ದು, ದಿನಕಳೆದಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜೊತೆಗೆ ಪತ್ರಿಕಾ ರಂಗದ ತಪ್ಪುಗಳನ್ನು ಎತ್ತಿ ಹಿಡಿಯುವ ಸ್ಥಿತಿ ಬಂದಿದೆ. ಸಮಾಜದಲ್ಲಿಂದು ಎಲ್ಲ ಕ್ಷೇತ್ರದವರಿಗೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಪತ್ರಕರ್ತರು ಕಟುಸತ್ಯವನ್ನು ನಿರ್ಭೀತಿಯಿಂದ ಬರೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.
ಮಾಧ್ಯಮ ಶ್ರೀ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಬೆಟ್ಟಕೊಪ್ಪ ಮಾತನಾಡಿ, ಪತ್ರಕರ್ತರು ವರದಿಗಾರಿಕೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಾಗ ಸಮಾಜದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರದ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ, ಸಂಘದ ತಾಲೂಕಾಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಮಾತನಾಡಿದರು. ವಿಜಯವಾಣಿ ವರದಿಗಾರ ಮಂಜುನಾಥ ಸಾಯಿಮನೆ ಅವರಿಗೆ ಗೋಲ್ಡನ್ ಪೆನ್ ಪುರಸ್ಕಾರ ನೀಡಲಾಯಿತು.
ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ, ಇತರರಿದ್ದರು. ಗಾಯಕಿ ರೇಖಾ ಸತೀಶ ಭಟ್ಟ ಪ್ರಾರ್ಥಿಸಿದರು. ಸ್ವರ್ಣವಲ್ಲೀ ಶ್ರೀಗಳ ಶುಭ ಸಂದೇಶವನ್ನು ಪ್ರವೀಣ ಹೆಗಡೆ, ಸಂಘದ ಉಪಾಧ್ಯಕ್ಷ ವಿನುತಾ ಹೆಗಡೆ ಹಾಗೂ ರವಿ ಹೆಗಡೆ ಗಡಿಹಳ್ಳಿ ಸನ್ಮಾನ ಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ, ಶಿವಪ್ರಸಾದ ಹಿರೇಕೈ ನಿರ್ವಹಿಸಿದರು. ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗ ನೀಡಿತ್ತು.
ಗ್ರಾಮೀಣ ಭಾಗದ ಪತ್ರಕರ್ತರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಉಚಿತ ಬಸ್ ಪಾಸ್ ಸೌಲಭ್ಯ ನೀಡಿದೆ. ಅದರಲ್ಲಿ ಕೆಲ ಮಾರ್ಪಾಟು ಆಗಬೇಕೆಂಬ ಒತ್ತಾಯವೂ ಕೇಳಿ ಬಂದಿದೆ. ಅದರ ಕುರಿತು ಮುಖ್ಯಮಂತ್ರಿ ಮತ್ತು ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಯಲ್ಲಿ ಪಕ್ಷ ಬೇಧ ಮರೆತು ಕೆಲಸ ಮಾಡುತ್ತೇವೆ. | ಭೀಮಣ್ಣ ನಾಯ್ಕ, ಶಾಸಕ
ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಜೀವ ವಿಮೆ ಅಥವಾ ಆರೋಗ್ಯ ವಿಮೆಯ ಸೌಲಭ್ಯ ಒದಗಿಸಬೇಕೆಂಬ ಚಿಂತನೆ ನಡೆದಿದೆ. ಇದನ್ನು ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸಲು ಸಂಘದಿಂದ ಪ್ರಯತ್ನ ನಡೆಸುತ್ತೇವೆ. | ಸಂದೇಶ ಭಟ್ಟ ಬೆಳಖಂಡ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ