ಮುದಗಲ್: ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದ ತಪ್ಪುಗಳನ್ನು ವರದಿಗಳ ಮೂಲಕ ತಿದ್ದುವ ಕೆಲಸ ಮಾಡುವ ಪತ್ರಕರ್ತರ ಕಾರ್ಯ ಜವಾಬ್ದಾರಿಯಿಂದ ಕೂಡಿದೆ ಎಂದು ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ವೈದ್ಯ ಎಂ.ವಿ.ಜೋಷಿ ಅವರ ಕಟ್ಟಡದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುದಗಲ್ ಘಟಕದ ನೂತನ ಪತ್ರಿಕಾ ಭವನದ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಮಾಜಮುಖಿಯಾಗಿ ಕೆಲಸ ಮಾಡುವ ಪತ್ರಕರ್ತರು ವಸ್ತುನಿಷ್ಠ, ನ್ಯಾಯಸಮ್ಮತವಾದ ವರದಿಗಳನ್ನು ಬರೆಯಬೇಕು. ಪತ್ರಿಕಾ ಭವನ ನಿರ್ಮಾಣ ಮಾಡಲು ಕೆಕೆಆರ್‌ಡಿಬಿ ಯೋಜನೆಯಡಿ 15 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್, ಎಸ್.ಆರ್.ರಸೂಲ್, ಸದಸ್ಯ ಮೆಹಬೂಬ್ ಸಾಬ್ ಕಡ್ಡಿಪುಡಿ, ಬಿಜೆಪಿ ಮಂಡಲ ಅಧ್ಯಕ್ಷ ಕರಿಯಪ್ಪ ಯಾದವ್, ಕಾಂಗ್ರೆಸ್ ಮುಖಂಡ ತಮ್ಮಣ್ಣ ಗುತ್ತೆದಾರ, ಅಹಿಂದ ಸಂಘಟನೆ ತಾಲೂಕಾಧ್ಯಕ್ಷ ಪರಮೇಶ ಕನ್ನಾಪುರಹಟ್ಟಿ, ಗದ್ದೆಪ್ಪ ಜಕ್ಕೇರಮಡು, ಫಕೀರಪ್ಪ ಕುರಿ, ರಾಘವೇಂದ್ರ ಕುದರಿ, ನಾಗರಾಜ ತಳವಾರ, ಎಸ್.ಎ.ನಯೀಮ್, ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ದುರುಗಪ್ಪ ಕಟ್ಟಿಮನಿ ಇತರರಿದ್ದರು.