ಮಹಾಲಿಂಗಪುರ ಕೆಎಲ್‌ಇ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಮನೋಹರ ಯಡವಟ್ಟಿ ಅವರನ್ನು ಸನ್ಮಾನಿಸಲಾಯಿತು. ಡಾ. ಕೆ. ಎಂ. ಅವರಾದಿ, ಡಾ. ಸುನಂದಾ ಸೋರಗಾಂವಿ ಇದ್ದರು. 
ಜಿಲ್ಲೆ

ಪತ್ರಕರ್ತರಿಂದ ಬಲಿಷ್ಠ ಭಾರತ ನಿರ್ಮಾಣ ಸಾಧ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಮಹಾಲಿಂಗಪುರ: ಪತ್ರಕರ್ತರು ಸಮಸ್ಯೆ ಗುರುತಿಸಿ ಪತ್ರಿಕೆಗಳ ಮೂಲಕ ಗಮನ ಸೆಳೆಯಬೇಕು ಎಂದು ಹಿರಿಯ ಪತ್ರಕರ್ತ ಮನೋಹರ ಯಡವಟ್ಟಿ ಹೇಳಿದರು.

ಮಹಾಲಿಂಗಾಪುರ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡ ಪ್ರಸ್ತುತ ಪತ್ರಿಕೋದ್ಯಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಪತ್ರಕರ್ತರು ಸತ್ಯಕ್ಕೆ ಅಂಟಿಕೊಂಡು ವರದಿ ಮಾಡಬೇಕು. ತಪ್ಪಿಲ್ಲದಂತೆ ಬರೆಯುವ ಸಾಮರ್ಥ್ಯ ಹೊಂದಿರಬೇಕು. ವಿವಿಧ ವಿಷಯಗಳಲ್ಲಿ ಪದವಿ ಮಾಡುವುದಕ್ಕೂ ಪತ್ರಿಕೋದ್ಯಮದಲ್ಲಿ ಪದವಿ ಮಾಡುವುದಕ್ಕೂ ವ್ಯತ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಪದವಿ ಮಾಡಿದರೆ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಬಹುದು. ಬಲಿಷ್ಠ ಭಾರತ ಕಟ್ಟುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜ್ ಪ್ರಾಚಾರ್ಯ ಡಾ. ಕೆ.ಎಂ.ಅವರಾದಿ ಮಾತನಾಡಿ, ಉತ್ತಮ ಪತ್ರಕರ್ತರಾಗಲು ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ನೈತಿಕತೆ ರೂಢಿಸಿಕೊಂಡು ಮಹಾವಿದ್ಯಾಲಯ ಗ್ರಂಥಾಲಯದಲ್ಲಿರುವ ಪುಸ್ತಕ, ಪತ್ರಿಕೆ ಹಾಗೂ ನಿಯತಕಾಲಿಕೆ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಐಕ್ಯೂಎಸಿ ಸಂಯೋಜಕಿ ಡಾ. ಸುನಂದಾ ಸೋರಗಾಂವಿ, ಎಸ್. ಎಸ್. ಮುಗಳ್ಯಾಳ, ಪಿ.ಎಸ್.ಹಿಪ್ಪರಗಿ, ಡಿ.ಎ.ನಾಯ್ಕ, ಎಸ್.ಎಸ್.ಕೊಡಗನೂರ, ಪಿ.ಎಸ್.ಹಿಪ್ಪರಗಿ, ಪ್ರವೀಣ ಅಥಣಿ, ಕೆ.ಎಸ್.ಪಾಟೀಲ, ಡಿ.ಎ.ಅಮ್ಮನಗಿ, ಪಿ.ಎಸ್.ಮನಗಾಂವಿ, ಪಿ.ಎಂ. ಮುತ್ನಾಳಿ, ಎಸ್.ಎಸ್.ಹಾರಗೊಪ್ಪ, ಜೆ.ಎಸ್. ಹೊರಟ್ಟಿ, ವೈ. ಎಂ. ದ್ಯಾಮಣ್ಣವರ ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಆರ್.ವಿ.ಚೌಗಲಾ ಸ್ವಾಗತಿಸಿದರು. ಪಿ.ಎಂ. ಗೌಳಿ ನಿರೂಪಿಸಿದರು. ಬಿ.ಐ.ಪಾಗದ ವಂದಿಸಿದರು.