ಜಿಲ್ಲೆ

ಖಾಸಗಿ ಸಾರಿಗೆ ಉದ್ಯಮ ಅಲ್ಲಗಳೆಯುವ ಯತ್ನ

ಜಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ತಂದು ಖಾಸಗಿ ಬಸ್ ಮಾಲೀಕರು ಮತ್ತು ಅದನ್ನು ನಂಬಿ ಬದುಕುತ್ತಿರುವ ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯ ಮಾಡಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶಪ್ಪ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಖಾಸಗಿ ಬಸ್ ಮಾಲೀಕರ ಸಂಘದಿಂದ ದಾವಣಗೆರೆ ಜಿಲ್ಲೆಯಾದ್ಯಂತ ಉಚಿತ ಸಂಚಾರಕ್ಕೆ ಬಸ್​ಪಾಸ್ ವಿತರಿಸಿ ಮಾತನಾಡಿದರು.

ಒಂದು ಖಾಸಗಿ ಬಸ್ ಉದ್ಯಮ ನಂಬಿಕೊಂಡು 40ಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿವೆ. ಇಷ್ಟು ವರ್ಷಗಳ ಕಾಲ ಲಕ್ಷಾಂತರ ಜನರು ಜೀವನ ರೂಪಿಸಿಕೊಂಡಿದ್ದಾರೆ. ಆದರೆ ಈಗ ಸರ್ಕಾರ ಖಾಸಗಿ ಸಾರಿಗೆ ಉದ್ಯಮವನ್ನು ಬಂದ್ ಮಾಡುವ ಹುನ್ನಾರ ನಡೆಸುತ್ತಿರುವುದು ನೋವಿನ ಸಂಗತಿ ಎಂದರು.

ವಿದ್ಯಾರ್ಥಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಕೂಲಿಕಾರ್ವಿುಕರಿಗೆ, ವೃದ್ಧರಿಗೆ, ಹಿರಿಯ ನಾಗರಿಕರಿಗೆ ಶಕ್ತಿ ಯೋಜನೆ ಜಾರಿಗೆ ತರಲಿ. ಆದರೆ ತೆರಿಗೆ ಕಟ್ಟುವ ಸಮೂಹಕ್ಕೂ, ಬಡವರಿಗೂ ಶಕ್ತಿ ಯೋಜನೆಯ ನೀತಿ ಅಷ್ಟು ಸರಿಯಲ್ಲ. ಸರ್ಕಾರ ಯೋಜನೆ ಮಾಡುವಾಗ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಕಳೆದ ಎರಡು ವರ್ಷಗಳಿಂದ ನಾವು ಬೀದಿಗೆ ಬಂದಿದ್ದೇವೆ. ತೆರಿಗೆ, ರಿಪೇರಿ ದಿನೇದಿನೆ ಹೆಚ್ಚಾಗುತ್ತಿದೆ. ಜನ ಖಾಸಗಿ ಬಸ್ ಹತ್ತದೇ ಕಲೆಕ್ಷನ್ ಇಲ್ಲವಾಗಿದೆ. ಅದರ ಮಧ್ಯೆ ನಮಗೆ ಪೈಪೋಟಿ ನೀಡಲು ನಮ್ಮ ಬಸ್ ಸಂಚರಿಸುವ ಸಮಯಕ್ಕೆ ಕೆಎಸ್​ಆರ್​ಟಿಸಿ ಬಸ್​ಗಳನ್ನು ಬಿಟ್ಟಿದ್ದಾರೆ. ನಾವು ಬೀದಿಗೆ ಬರುವಂತಾಗಿದೆ ಎಂದು ತಿಳಿಸಿದರು.

ಸಂಘದ ಗೌರವಾಧ್ಯಕ್ಷ ಕಂಬತ್ತಹಳ್ಳಿ ಮಂಜುನಾಥ್ ಮಾತನಾಡಿ, ಸರ್ಕಾರ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿದೆಯೋ ಹಾಗೇ ಖಾಸಗಿ ಬಸ್​ಗಳಿಗೂ ನೀಡಲಿ. ಆರ್ಥಿಕ ನಷ್ಟದಲ್ಲಿ ನಾವು ನಲುಗಿ ಹೋಗಿದ್ದೇವೆ. ಸಾಲ ಮಾಡಿ ಉದ್ಯಮ ಮಾಡುತ್ತಿದ್ದೇವೆ. ಸರ್ಕಾರ ಈಗಲಾದರೂ ನಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿ ಎಂದರು.

ಉಪಾಧ್ಯಕ್ಷ ಎಚ್.ಸಿ. ಮಹೇಶ್ ಮಾತನಾಡಿ, ಪತ್ರಕರ್ತರಿಗೆ ಉಚಿತ ಬಸ್​ಪಾಸ್ ನೀಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಇದು ಗ್ರಾಮಾಂತರ ಮಟ್ಟದಲ್ಲಿ ವರದಿ ಮಾಡುವವರಿಗೆ ಅನುಕೂಲವಾಗಲಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಖಾಸಗಿ ಬಸ್ ಸಂಚಾರ ಇದೆ. ಸರ್ಕಾರ ನಮಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಕರ್ತರ ಸಂಘದ ತಾಲೂಧ್ಯಕ್ಷ ಜಿ.ಎಸ್. ಚಿದಾನಂದ ಮಾತನಾಡಿ, ಉಚಿತ ಬಸ್​ಪಾಸ್ ನೀಡಿದ ಖಾಸಗಿ ಮಾಲೀಕರ ಸಂಘಕ್ಕೆ ಮತ್ತು ಸಹಕಾರ ನೀಡಿದ ಹೊಸಕೆರೆ ಮುಕುಂದ್​ಗೆ ಕೃತಜ್ಞತೆ ಅರ್ಪಿಸಿದರು.

ಕಾರ್ಯಕ್ರಮದಲ್ಲಿ ಮಾಲೀಕರ ಸಂಘದ ನಿರ್ದೇಶಕ ವೀರೇಂದ್ರ ಪಾಟೀಲ್, ಸೈಯದ್​ಅನ್ವರ್, ಅಬೂಬಕ್ಕರ್ ಸಿದ್ಧಿಕ್. ಸಾತ್ವಿಕ್, ವೀರೇಶ್ ಶಿವಗಂಗಾ, ಖಜಾಂಚಿ ಅಸ್ಲಾಮ್ ಇಮ್ತಿಯಾಜ್, ಇಲಿಯಾಸ್, ಪ್ರತಾಪ್​ರೆಡ್ಡಿ, ಕಾರ್ಯದರ್ಶಿ ಎಂ.ಆರ್. ಸತೀಶ್ ಮತ್ತು ನಿರ್ದೇಶಕ ಜಗದೀಶ್​ರೆಡ್ಡಿ ಮಾತನಾಡಿದರು.

ಪತ್ರಕರ್ತರಾದ ಎಂ.ಸಿ. ಬಸವರಾಜ್, ಎಚ್.ಆರ್. ಬಸವರಾಜ್, ಶಿವಲಿಂಗಪ್ಪ, ಸಿದ್ದಮ್ಮನಹಳ್ಳಿ ಬಸವರಾಜ್, ಸೊಕ್ಕೆ ಜಗದೀಶ್, ಎಸ್.ಎಂ. ಸೋಮನಗೌಡ, ಕೆ.ಎಂ. ಜಗದೀಶ್, ಮಾರುತಿ, ಜೆ.ಒ. ರವಿಕುಮಾರ್, ಗೋಗುದ್ದ ತಿಪ್ಪೇಸ್ವಾಮಿ, ಮಾದಿಹಳ್ಳಿ ಮಂಜುನಾಥ್, ಧನ್ಯಕುಮಾರ್, ಮಹಾಂತೇಶ್ ಬ್ರಹ್ಮ, ಮರೇನಹಳ್ಳಿ ಬಾಬು, ಜಗಜೀವನ್​ರಾಮ್ ರಕೀಬ್ ಮತ್ತಿತರರಿದ್ದರು.