ಜಿಲ್ಲೆ

ಡಿಜಿಟಲ್ ಆಗುತ್ತಿವೆ ಮಾಧ್ಯಮಗಳು: ಹಿರಿಯ ಪತ್ರಕರ್ತ ಬಾಲಸುಬ್ರಹ್ಮಣ್ಯಂ ಅಭಿಮತ

ತುಮಕೂರು: ಜಗತ್ತಿನ ಎಲ್ಲ ಮಾಧ್ಯಮಗಳೂ ಡಿಜಿಟಲ್‌ಗೊಳ್ಳುವ ದಿನಗಳು ದೂರವಿಲ್ಲ ಎಂದು ಹಿರಿಯ ಪತ್ರಕರ್ತ ಕೆ.ಆರ್.ಬಾಲಸುಬ್ರಹ್ಮಣ್ಯಂ ಹೇಳಿದರು.

ವಿಶ್ವವಿದ್ಯಾಲಯದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಾಗೂ ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗಗಳ ಸಹಯೋಗದಲ್ಲಿ ಹುತಾತ್ಮರ ದಿನದ ಅಂಗವಾಗಿ ಆಯೋಜಿಸಿದ್ದ ಸಂವಾದದಲ್ಲಿ ‘ವಾಣಿಜ್ಯ ಪತ್ರಿಕೋದ್ಯಮದ ಅವಕಾಶಗಳು ಹಾಗೂ ಪ್ರವೃತ್ತಿಗಳು’ ಕುರಿತು ಮಾತನಾಡಿದ ಅವರು, ವರ್ತಮಾನದ ಸನ್ನಿವೇಶದಲ್ಲಿ ಮಾಧ್ಯಮಗಳು ಡಿಜಿಟಲ್ ರೂಪದಲ್ಲಿ ಪ್ರಕಟಗೊಳ್ಳಲು ಅವಕಾಶವಿಲ್ಲ. ಅಂತಹ ಮನಸ್ಥಿತಿಗೆ ಇನ್ನೂ ಸಮಾಜ ಒಗ್ಗಿಕೊಂಡಿಲ್ಲ. ಸಾಕಷ್ಟು ಮಂದಿ ಮುದ್ರಣ ಮಾಧ್ಯಮವನ್ನೇ ಅವಲಂಬಿಸಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಮಾಧ್ಯಮಗಳೂ ಡಿಜಿಟಲ್ ಆಗಲಿವೆ ಎಂದರು.

ಸಾಮಾಜಿಕ ಮಾಧ್ಯಮಗಳನ್ನು ಮಾಧ್ಯಮದ ವಿದ್ಯಾರ್ಥಿಗಳು ಗರಿಷ್ಠ ಸದುಪಯೋಗಪಡಿಸಿಕೊಳ್ಳಬೇಕು. ಟ್ವಿಟರ್‌ನಂತಹ ಮಾಧ್ಯಮಗಳನ್ನು ಪ್ರಪಂಚದ ಉನ್ನತ ನಾಯಕರು, ಗಣ್ಯವ್ಯಕ್ತಿಗಳು ವ್ಯಾಪಕವಾಗಿ ಬಳಸುತ್ತಿದ್ದು ಪತ್ರಕರ್ತರು ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿಗಳು ಇಂತಹ ಮಾಧ್ಯಮಗಳನ್ನು ಅವಲಂಬಿಸುವುದು ಅನಿವಾರ್ಯ ಎಂದ ತಿಳಿಸಿದರು.

ಗಾಂಧೀಜಿಯವರನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಅವರ ಸಂದೇಶಗಳನ್ನು ಆಚರಣೆಗೆ ತರುವುದು ಅಗತ್ಯವಾಗಿದೆ. ದಯೆ ಹಾಗೂ ತಾಳ್ಮೆ ಗಾಂಧೀಜಿಯವರ ಪತ್ರಿಕೋದ್ಯಮದ ಅಂತಃಸತ್ವವಾಗಿತ್ತು. ಕಟ್ಟಕಡೆಯವನ ಅಭಿವೃದ್ಧಿಯ ಗಾಂಧಿ ಕನಸಿಗೆ ಅವರ ಪತ್ರಿಕೆಗಳು ಪೂರಕವಾಗಿದ್ದವು. ಪತ್ರಿಕೋದ್ಯಮ ತನ್ನ ಆತ್ಮದ ಪ್ರತಿಬಿಂಬ ಎಂದೇ ಅವರು ನಂಬಿದ್ದರು. ಸುಳ್ಳುಸುದ್ದಿ, ವೈಭವೀಕರಣಗಳೇ ಮೇಲುಗೈ ಸಾಧಿಸುತ್ತಿರುವ ಇಂದಿನ ಮಾಧ್ಯಮ ರಂಗಕ್ಕೆ ಗಾಂಧೀಜಿಯವರು ಆದರ್ಶವಾಗಬೇಕು ಎಂದು ಜೈನ್ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಭಾರ್ಗವಿ ಡಿ. ಹೆಮ್ಮಿಗೆ ಹೇಳಿದರು.

ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಟಿವಿ ವಾರ್ತೆ ಹಾಗೂ ಸುದ್ದಿಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು. ಕುಲಸಚಿವ ಪ್ರೊ. ಕೆ. ಎನ್.ಗಂಗಾನಾಯಕ್, ಕಲಾ ಕಾಲೇಜಿನ ಪ್ರಾಂಶುಪಾಲ ಕೆ.ರಾಮಚಂದ್ರಪ್ಪ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಯೋಜಕ ಸಿಬಂತಿ ಪದ್ಮನಾಭ ಕೆ.ವಿ ಮತ್ತಿತರರು ಉಪಸ್ಥಿತರಿದ್ದರು.

ಮಹಾತ್ಮ ಗಾಂಧಿ ಶ್ರೇಷ್ಠ ಪತ್ರಕರ್ತ : ಗಾಂಧೀಜಿ ಎಲ್ಲ ಕಾಲಕ್ಕೂ ಮಾದರಿಯಾಗಬಲ್ಲ ಭಾರತದ ಶ್ರೇಷ್ಠ ಪತ್ರಕರ್ತ. ಗಾಂಧೀಜಿಯನ್ನು ಅರ್ಥಮಾಡಿಕೊಂಡದ್ದಕ್ಕಿಂತಲೂ ಅಪಾರ್ಥ ಮಾಡಿಕೊಂಡದ್ದೇ ಹೆಚ್ಚು. ಅವರು ದೇಶವನ್ನು ಒಡೆದರು ಎಂಬಿತ್ಯಾದಿ ಕಲ್ಪನೆಗಳನ್ನು ಬಿತ್ತಲಾಗುತ್ತಿದೆ ಎಂದು ಡಾ.ಭಾರ್ಗವಿ ಡಿ. ಹೆಮ್ಮಿಗೆ ತಿಳಿಸಿದರು.

ಮಾಧ್ಯಮಗಳು ಇಲ್ಲದೇ ಹೋಗಿದ್ದರೆ ಪ್ರಜಾಪ್ರಭುತ್ವ ಕೇವಲ ಅಣಕವಾಗುತ್ತಿತ್ತು. ಸಮಾಜದ ಆರೋಗ್ಯಕ್ಕೆ ಅನೌಪಚಾರಿಕ ನಿಯಂತ್ರಣ ಬೇಕು. ಪತ್ರಿಕೆಗಳು ಆ ಕೆಲಸವನ್ನು ನಿರ್ವಹಿಸುತ್ತಿವೆ. ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು. ಸಮಾಜದ ಆಧಾರಸ್ತಂಭವಾಗಿರುವ ಸಣ್ಣ ಪತ್ರಿಕೆಗಳನ್ನು ಬಲಪಡಿಸಬೇಕು. ಪ್ರೊ. ವೈ.ಎಸ್.ಸಿದ್ದೇಗೌಡ ವಿವಿ ಕುಲಪತಿ ಇಂಗ್ಲೀಷ್ ಭಾಷೆ ಜಗತ್ತಿನ ಅನಿವಾರ್ಯತೆ. ಯುವಜನತೆ ಆ ಭಾಷೆ ಪಳಗಿಸಿಕೊಳ್ಳಲೇಬೇಕು. ಆದರೆ, ಕನ್ನಡ ಮಾಧ್ಯಮದಿಂದ ಬಂದವರೆಂಬ ಕೀಳರಿಮೆ ಬೇಡ. ಒಳ್ಳೆಯ ಕನ್ನಡ ಅಭ್ಯಾಸ ಮಾಡಿದವರಿಗೆ ಇಂಗ್ಲೀಷ್ ಸುಲಭವಾಗಿ ಕರಗತವಾಗಲಿದೆ. ಕೆ.ಆರ್.ಬಾಲಸುಬ್ರಮಣ್ಯಂ ಹಿರಿಯ ಪತ್ರಕರ್ತ