ಜಿಲ್ಲೆ

ಪತ್ರಿಕೋದ್ಯಮದ ಮೇಲಿದೆ ಮಹತ್ತರ ಜವಾಬ್ದಾರಿ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ನಾರದರ ಕಾಲದಿಂದ ಪ್ರಸಕ್ತ ದಿನಮಾನಗಳಲ್ಲಿಯೂ ಸಮಾಜದಲ್ಲಿ ಪತ್ರಿಕೋದ್ಯಮ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದೆ. ಇಂದಿನ ಸಾಮಾಜಿಕ ಜಾಲತಾಣ, ತಂತ್ರಜ್ಞಾನದ ಭರಾಟೆ ಮಧ್ಯೆಯೂ ಜನರಿಗೆ ನಿಖರ ಮಾಹಿತಿ ನೀಡಬಲ್ಲ ಕಾರ್ಯ ಪತ್ರಕರ್ತರಿಂದ ಆಗಬೇಕು ಎಂದು ಭಾರತ ಟಿಬೇಟ್​ ಸಮನ್ವಯ ಕೇಂದ್ರದ ಸಹ ಸಂಯೋಜಕ ಅಮೃತ ಜೋಶಿ ಹೇಳಿದರು.

ಪಟ್ಟಣದ ಸ್ಟೇಟ್​ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸಭಾ ಭವನದಲ್ಲಿ ಬೆಳಗಾವಿಯ ಜನಕಲ್ಯಾಣ ಟ್ರಸ್ಟ್​ ಶುಕ್ರವಾರ ಹಮ್ಮಿಕೊಂಡಿದ್ದ ಆದ್ಯ ಪತ್ರಕರ್ತ ದೇವರ್ಷಿ ನಾರದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನ ಕಲ್ಯಾಣ ಟ್ರಸ್ಟ್​ ನಿರ್ದೇಶಕ ಪರಮೇಶ್ವರ ಹೆಗಡೆ ಮಾತನಾಡಿ, ಸ್ವಾರ್ಥ ರಹಿತವಾಗಿ ನಾರದ ಮುನಿಗಳು ಅಂದು ಲೋಕ ಕಲ್ಯಾಣಕ್ಕಾಗಿ ಸುದ್ದಿ ಪ್ರಸಾರ ಮಾಡುವ ಮೂಲಕ ತ್ರಿಲೋಕದ ಅಂಕು&ಡೊಂಕು ತಿದ್ದುವ ಕೆಲಸ ಮಾಡಿದ್ದರು. ಪತ್ರಕರ್ತರು ಹಾಗೂ ಮಾಧ್ಯಮಗಳು ವಸ್ತು ನಿಷ್ಠ ವರದಿಗಳಿಗೆ ಆದ್ಯತೆ ನೀಡಬೇಕು ಎಂದರು.

ಪ್ರೆಸ್​ಕ್ಲಬ್​ ಅಧ್ಯ ಮಲ್ಲಿಕಾರ್ಜುನ ದೂಪದ ಮಾತನಾಡಿದರು. ನಿವೃತ್ತ ಉಪನ್ಯಾಸಕ ವಿ.ಎನ್​.ಗೋಡಖಿಂಡಿ, ಪ್ರೊ.ಎಸ್​.ವಿ.ಕುಲಕರ್ಣಿ, ಪ್ರೊ.ಎಸ್​.ವಿ.ಹೊನ್ನುಂಗರ ಇತರರಿದ್ದರು. ಚೇತನ ದೊಡ್ಡಮನಿ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಬಾವಿಕಟ್ಟಿ ಸ್ವಾಗತಿಸಿದರು. ಸಂಗಮೇಶ ಉದಪುಡಿ ನಿರೂಪಿಸಿದರು. ಅರುಣ ಹೊಸಮಠ ವಂದಿಸಿದರು.