ಜಿಲ್ಲೆ

ರಾಜಕೀಯ ಒತ್ತಡಕ್ಕೆ ಒಳಗಾಗದಂತೆ ಮಂಡ್ಯ ಎಸ್ಪಿಗೆ ಜೋಶಿ ಎಚ್ಚರಿಕೆ

ಹುಬ್ಬಳ್ಳಿ : ನಾಗಮಂಗಲ ಗಲಭೆ ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೆ ಒಳಗಾಗಿ ಏನೇನೋ ಹುಚ್ಚಾಟ ಮಾಡಬೇಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಮಂಡ್ಯ ಎಸ್ಪಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಇದ್ದಂತಿದೆ. ನಿಜವಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿ ಎಂದು ಸೂಚಿಸಿದರು.

ನಾಗಮಂಗಲದಲ್ಲಿ ಗಣಪತಿ ಪ್ರತಿಷ್ಠಾಪನೆ, ಮೆರವಣಿಗೆ ಎಲ್ಲದೂ ಸರ್ಕಾರದ ನಿಯಮ ಮತ್ತು ಪೊಲೀಸ್ ಇಲಾಖೆ ಅನುಮತಿ ಮೇರೆಗೆ ನಡೆದಿದೆ. ಗಲಭೆ ಖಂಡಿಸಿ ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದು ಹೇಳಿದರು.

ಮಸೀದಿ ಇರುವುದೇ ರಸ್ತೆಯಲ್ಲಿ. ಇನ್ನು, ಇಲ್ಲಿ ಓಡಾಡಬೇಡಿ, ವಾದ್ಯ ಬರಿಸಬೇಡಿ ಎಂದರೆ ಹೇಗೆ? ಇದನ್ನೇನು ಪಾಕಿಸ್ತಾನ ಮಾಡಿದ್ದಾರೆಯೇ? ಎಂದು ಜೋಶಿ ಹರಿ ಹಾಯ್ದರು.

ಗಲಭೆಯಲ್ಲಿ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದವರನ್ನು ಬಿಟ್ಟು ಗಣಪತಿ ಇಟ್ಟವರನ್ನು, ಸಿಕ್ಕ ಸಿಕ್ಕವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಿ ಕ್ರಮ ಜರುಗಿಸುವುದು ಸರಿಯಲ್ಲ ಎಂದು ಜೋಶಿ ಖಂಡಿಸಿದರು.

ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದೆ. ಹಿಂದೆ ಲಾಲೂ ಪ್ರಸಾದ ಯಾದವ್ ಅವರಿಗೂ ಬೇಲ್ ಸಿಕ್ಕಿತ್ತು. ಆಮೇಲೆ ಶಿಕ್ಷೆಗೆ ಗುರಿಯಾದರು ಎಂದು ಪ್ರಲ್ಹಾದ ಜೋಶಿ ಹೇಳಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ, ನ್ಯಾಯಾಲಯ ಅವರನ್ನು ಇನ್ನೂ ಆರೋಪಮುಕ್ತ ಮಾಡಿಲ್ಲ. ಬಿಜೆಪಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.

ಹಿಂದೆ ಲಾಲೂ ಪ್ರಸಾದ ಯಾದವ್ ಅವರಿಗೂ ಬೇಲ್ ಸಿಕ್ಕಿತ್ತು. ಸಮಗ್ರ ವಿಚಾರಣೆ ಬಳಿಕ ಆರೋಪ ಸಾಬೀತಾಗಿ ಶಿಕ್ಷೆಗೆ ಒಳಗಾದರು ಎಂದರು.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಅತ್ಯುನ್ನತವಾಗಿದೆ ಮತ್ತು ಅತ್ಯಂತ ಶ್ರೇಷ್ಠವಾಗಿದೆ ಎಂಬುದಕ್ಕೆ ಇದು ನಿದರ್ಶನ ಎಂದು ಹೇಳಿದರು.