ಹುಬ್ಬಳ್ಳಿ: ರಾಜ್ಯದಲ್ಲಿ ಕೊಲೆ, ಸುಲಿಗೆ, ಆತ್ಮಹತ್ಯೆಯಂಥ ಪ್ರಕರಣಗಳು ಹೆಚ್ಚಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೊಣೆಗೇಡಿ ಹೇಳಿಕೆಗಳೇ ಕಾರಣ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಇಲ್ಲಿಯ ವೀರಾಪುರ ಓಣಿಯಲ್ಲಿ ಕೊಲೆಗೀಡಾದ ಅಂಜಲಿ ಅಂಬಿಗೇರ ಮನೆಗೆ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನೇಹಾ ಹಿರೇಮಠ ಹತ್ಯೆ ನಂತರ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ಗಂಭೀರವಾಗಿ ವತಿರ್ಸಲಿಲ್ಲ. ಕೊಲೆ ವೈಯಕ್ತಿಕ ಎಂದು ಹೇಳುವ ಮೂಲಕ ಪಾತಕಿಗಳಿಗೆ ಕುಮ್ಮಕ್ಕು ನೀಡುವ ರೀತಿ ನಡೆದುಕೊಂಡರು. ಜನಾಂದೋಲನ ನಡೆದ ನಂತರ ಬದಲಾದರು ಎಂದರು.
ಸಿಬಿಐಗೆ ವಹಿಸಲಿ:
ಅಂಜಲಿ ಕುಟುಂಬದವರು ಮೊದಲೇ ದೂರು ನೀಡಿದರೂ ಪೊಲೀಸರು ತೆಗೆದುಕೊಂಡಿಲ್ಲ. ಹಂತಕನು ಅಂಜಲಿ ಅಲ್ಲದೇ ಬೇರೊಬ್ಬರಿಗೂ ಧಮಕಿ ಹಾಕಿ ಒಡವೆ ಒಯ್ದಿದ್ದಾನೆ. ಅವರ ದೂರನ್ನೂ ಸ್ವೀಕರಿಸಿಲ್ಲ. ಆಗಿನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಬಗ್ಗೆಯೂ ತನಿಖೆ ನಡೆಯಬೇಕು. ನೇಹಾ ಹಾಗೂ ಅಂಜಲಿ ಎರಡೂ ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದರೆ ಎಲ್ಲವೂ ಬಹಿರಂಗವಾಗಲಿದೆ ಎಂದು ಜೋಶಿ ಆಗ್ರಹಿಸಿದರು.
ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಕೊಲೆ, 692 ರೈತ ಆತ್ಮಹತ್ಯೆಗಳು ಆಗಿವೆ. ಅಲ್ಲದೇ ಸುಲಿಗೆ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಆತ್ಮಹತ್ಯೆಗಳನ್ನು ರಾಜ್ಯ ಸರ್ಕಾರ ಲುವಾಗಿ ಪರಿಗಣಿಸಿದೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿರುವುದರಿಂದ ಸರ್ಕಾರಕ್ಕೆ ಯಾವುದೇ ನಿಯಂತ್ರಣ ಇಲ್ಲವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಈ ಸರ್ಕಾರದಲ್ಲಿ ಹತ್ಯೆ, ಆತ್ಮಹತ್ಯೆ ಹಾಗೂ ಅಭಿವೃದ್ಧಿ ಸಮಾಧಿಯೇ ಸಾಧನೆಯಾಗಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ಸಂಪೂರ್ಣ ವಿಲವಾಗಿದೆ. ಜನರು ಭಯಭೀತರಾಗಿದ್ದಾರೆ. ಹೆಣ್ಣು ಮಕ್ಕಳನ್ನು ಹೊರಗೆ ಕಳುಹಿಸಲು ಹಿಂಜರಿಯುವಂತಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ತ್ವರಿತ ನ್ಯಾಯಾಲಯ ಸ್ಥಾಪಿಸಿ ಹಂತಕರಿಗೆ ಶಿಕ್ಷೆ ಕೊಡಿಸಬೇಕು. ಮಹಿಳೆಯರಲ್ಲಿ ಆತ್ಮಸ್ಥೆ$ರ್ಯ ತುಂಬುವ ಕೆಲಸ ಮಾಡಬೇಕು ಎಂದು ಜೋಶಿ ಆಗ್ರಹಿಸಿದರು.
ಐಜಿ ಕೇಡರ್ ಏಕಿಲ್ಲ:
ಪೊಲೀಸ್ ಕಮಿಷ್ನರೇಟ್ ಆದಾಗಿನಿಂದಲೂ ಹುಬ್ಬಳ್ಳಿ ಧಾರವಾಡಕ್ಕೆ ಐಜಿ ಕೇಡರ್ ಅಧಿಕಾರಿಗಳನ್ನು ನೇಮಿಸುತ್ತ ಬರಲಾಗಿದೆ. ಕಾಂಗ್ರೆಸ್ ಸರ್ಕಾರ ಏಕೆ ಎಸ್ಪಿ ಕೇಡರ್ ಅಧಿಕಾರಿಯನ್ನು ಕಮೀಷ್ನರ್ ಆಗಿ ನೇಮಿಸಿತು? ಎಂದು ಪ್ರಶ್ನಿಸಿದ ಸಚಿವ ಪ್ರಲ್ಹಾದ ಜೋಶಿ, ಕಮಿಷ್ನರೇಟ್ ಅನ್ನು ಎಸ್ಪಿ ಮಟ್ಟಕ್ಕೆ ಇಳಿಸಿದ ತಿಳಿಗೇಡಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಧಾರವಾಡದಲ್ಲಿ ಅನೇಕ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಕೆಲವೇ ಅಧಿಕಾರಿಗಳನ್ನು ಅಮಾನತು ಮಾಡಿ ಇದೀಗ ಕಣ್ಣೊರೆಸುವ ತಂತ್ರವನ್ನು ಸರ್ಕಾರ ಅನುಸರಿಸಬಾರದು ಎಂದರು.
ಅಂಜಲಿ ಕುಟುಂಬದವರಿಗೆ ಮನೆ ನೀಡುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡುವೆ. ಮನೆಯ ಸದಸ್ಯರಿಗೆ ಗುತ್ತಿಗೆ ಆಧಾರದ ಕೆಲಸ ಕೊಡಿಸಬೇಕು, ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.