ಜಿಲ್ಲೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೆ ಹೋರಾಟ, ಕೇಂದ್ರ ಸಚಿವ ಜೋಶಿ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮತ್ತೊಂದು ಪಾದಯಾತ್ರೆ ನಡೆಸುವ ಮೂಲಕ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ, ಮುಡಾ ಹಗರಣದ ವಿರುದ್ಧ ಬಿಜೆಪಿ ಹೋರಾಟ ನಿಲ್ಲುವುದಿಲ್ಲ. ಬಿಜೆಪಿ ಹೋರಾಟ ಸರಿ ದಿಕ್ಕಿನಲ್ಲೇ ಇದೆ. ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಸರಿಯಾದ ದಿಕ್ಕಿನಲ್ಲೇ ನಡೆಯುತ್ತಿದೆ. ಪಕ್ಷದೊಳಗೆ ಯಾವುದೇ ಅಪಸ್ವರವಿಲ್ಲ ಎಂದು ಪ್ರತಿಕ್ರಿಯಿಸಿದರು.

ಹೋರಾಟಕ್ಕೆ ಮೊದಲ ಪಾದಯಾತ್ರೆ, ಎರಡನೇ ಪಾದಯಾತ್ರೆ ಎನ್ನಬೇಕಿಲ್ಲ. ಪಕ್ಷದೊಳಗೆ ಎಲ್ಲರೂ ಕೂಡಿಯೇ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಸಚಿವರು ಮಾಹಿತಿ ನೀಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಗೃಹ ಸಚಿವರು ಸೇರಿ ನಾಯಕರೆಲ್ಲ ಮತ್ತೊಂದು ಸುತ್ತಿನ ಹೋರಾಟದ ಬಗ್ಗೆ ನಿರ್ಧರಿಸಲಿದ್ದಾರೆ. ರಾಜ್ಯದ ನಾಯಕರ ಮುಂದಾಳತ್ವದಲ್ಲೇ ನಡೆಯುತ್ತದೆ ಎಂದರು.

ಕುಮಾರಸ್ವಾಮಿ ಅಕ್ರಮ ಎಸಗಿದ್ದರೆ 8 ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್ನವರು ಏಕೆ ಸುಮ್ಮನಿದ್ದರು? ಈಗ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡುತ್ತಲೇ ಆರೋಪ ಮಾಡುತ್ತಿದ್ದಾರೆ ಎಂದು ಜೋಶಿ ಹರಿಹಾಯ್ದರು.

ಛಲವಾದಿ ನಾರಾಯಣಸ್ವಾಮಿ ಅವರ ಮೇಲಿನ ಆರೋಪ 2004ರದ್ದು, ಮುರುಗೇಶ ನಿರಾಣಿ ಮೇಲಿನ ಆರೋಪ 2008ರದ್ದು. ಕಾಂಗ್ರೆಸ್ನವರು ಈಗ ಏಕೆ ಮುನ್ನಲೆಗೆ ತರುತ್ತಿದ್ದಾರೆ. ಇದು ಬ್ಲ್ಯಾಕ್ ಮೇಲ್ ತಂತ್ರವಲ್ಲವೇ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.