ಹುಬ್ಬಳ್ಳಿ : ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಾಸಕ ಗಾಲಿ ಜನಾರ್ಧನ ರೆಡ್ಡಿ ಹೆಸರು ಕೇಳಿಬರುತ್ತಿರುವ ಬೆನ್ನಲ್ಲೇ ಅವರು ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿ, ಮಯೂರಿ ಎಸ್ಟೇಟ್ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಮನೆಗೆ ಭೇಟಿ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಸುಮಾರು ಒಂದು ತಾಸು ರಹಸ್ಯ ಮಾತುಕತೆ ನಡೆಸಿದ್ದಾರೆ. ಜೋಶಿ ಅವರ ಮನೆಯಿಂದ ಹೊರಬಂದ ಜನಾರ್ಧನ ರೆಡ್ಡಿ, ಮಾಧ್ಯಮದವರ ಕಣ್ಣು ತಪ್ಪಿಸಿ ಹೊರನಡೆಯಲು ಯತ್ನಿಸಿದರು. ಕೊನೆಗೆ ಮಾಧ್ಯಮ ಪ್ರತಿನಿಧಿಗಳ ಎದುರು ಹಾಜರಾದ ಅವರು, ಮಾರ್ಚ್ನಲ್ಲಿ ನನ್ನ ಮೊಮ್ಮಗನ ನಾಮಕರಣ ಸಮಾರಂಭ ಇದೆ. ಸಮಾರಂಭಕ್ಕೆ ಆಹ್ವಾನ ನೀಡಲು ಬಂದಿದ್ದೆ. ಇದು ವೈಯಕ್ತಿಕ ಭೇಟಿ. ರಾಜಕೀಯ ಚರ್ಚೆ ನಡೆದಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವುದಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷದ ಬೆಳವಣಿಗೆಯನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ಎಂದು ಹೇಳಿದರು.
ತೇಲ್ಕೂರ್ ಭೇಟಿ: ಶಾಸಕ ಜನಾರ್ಧನ ರೆಡ್ಡಿ ಹೊರಟ ಕೆಲವೇ ಸಮಯದಲ್ಲಿ ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್, ಪ್ರಲ್ಹಾದ ಜೋಶಿ ಅವರನ್ನು ಭೇಟಿಯಾದರು. ಜೋಶಿ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿ ಹೊರಬಂದ ರಾಜಕುಮಾರ ಪಾಟೀಲ, ಹುಬ್ಬಳ್ಳಿಯಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಳ್ಳುವುದಕ್ಕೆ ಆಗಮಿಸಿದ್ದೆ. ಈ ಸಂದರ್ಭದಲ್ಲಿ ಜೋಶಿ ಅವರನ್ನು ಭೇಟಿಯಾಗಿ ಕುಶಲೋಪರಿ ನಡೆಸಿದ್ದಾಗಿ ತಿಳಿಸಿದರು.
ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪಕ್ಷದ ಆಂತರಿಕ ವಿಷಯ ಸೇರಿದಂತೆ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳಿದರು.