ಹುಬ್ಬಳ್ಳಿ : ಸತತ ಐದನೇ ಬಾರಿಗೆ ಧಾರವಾಡ ಲೋಕಸಭೆ ಕ್ಷೇತ್ರದಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚುನಾವಣೆ ಫಲಿತಾಂಶದ ರಾತ್ರಿಯೇ ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.
ದೆಹಲಿಯಲ್ಲಿ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪ್ರಲ್ಹಾದ ಜೋಶಿ ರಾತ್ರಿ 9.30ಕ್ಕೆ ಹುಬ್ಬಳ್ಳಿಯಿಂದ ತೆರಳಿದರು.
ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಿಂದ ಪ್ರಮಾಣ ಪತ್ರ ಪಡೆದ ಜೋಶಿ, ಕುಟುಂಬದ ಸದಸ್ಯರು, ಧಾರವಾಡ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಧಾರವಾಡ ಹಾಗೂ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರದ ಪಕ್ಷದ ಪ್ರಮುಖರು, ಕಾರ್ಯಕರ್ತರೊಂದಿಗೆ ಧಾರವಾಡದ ಮುರುಘಾಮಠಕ್ಕೆ ಭೇಟಿ ನೀಡಿದರು. ಧಾರವಾಡದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಹುಬ್ಬಳ್ಳಿಗೆ ಆಗಮಿಸಿ, ಸಿದ್ಧಾರೂಢಮಠ, ಮೂರುಸಾವಿರ ಮಠ ಸೇರಿದಂತೆ ವಿವಿಧ ಮಠ, ದೇವಸ್ಥಾನ, ಆರ್ಎಸ್ಎಸ್ ಕಾರ್ಯಾಲಯ ಕೇಶವ ಕುಂಜ, ಅರವಿಂದ ನಗರದ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ನಂತರ ಕೇಶ್ವಾಪುರದ ಮಯೂರಿ ಎಸ್ಟೇಟ್ನಲ್ಲಿರುವ ತಮ್ಮ ಮನೆಗೆ ತೆರಳಿದರು. ರಾತ್ರಿ ಸುಮಾರು 9 ಗಂಟೆಗೆ ಮನೆಯಿಂದ ಹೊರಟು, ವಿಮಾನ ನಿಲ್ದಾಣ ತಲುಪಿದರು.