ಮೈಸೂರು: ನಾಡಹಬ್ಬ ಮೈಸೂರು ದಸರಾ ಉತ್ಸವದ ಅಂಗವಾಗಿ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರಲ್ಲಿ ಅ. 6ರಿಂದ 13ರವರೆಗೆ ‘ಯುವ ಸಂಭ್ರಮ’ ಆಯೋಜಿಸಲಾಗಿದೆ ಎಂದು ಯುವ ಸಂಭ್ರಮ ಉಪ ಸಮಿತಿ ವಿಶೇಷಾಧಿಕಾರಿ ಹಾಗೂ ಎಸ್ಪಿ ಸೀಮಾ ಲಾಟ್ಕರ್ ತಿಳಿಸಿದರು.
ದಸರಾ ಮಹೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಪ್ರತಿಭೆ ಅನಾವರಣಕ್ಕೆ ಯುವ ಸಂಭ್ರಮ ಆಯೋಜಿಸುವ ಮೂಲಕ ವೇದಿಕೆ ಕಲ್ಪಿಸಲಾಗುತ್ತಿದೆ. ಅಂತೆಯೆ, ಅ. 6ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಯುವ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ತಾರಾ ದಂಪತಿ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
400ಕ್ಕೂ ಹೆಚ್ಚು ಕಾಲೇಜುಗಳು ಭಾಗಿ: ಯುವ ಸಂಭ್ರಮದಲ್ಲಿ ಮೈಸೂರು ಮತ್ತು ರಾಜ್ಯದ ಇತರ ವಿಶ್ವವಿದ್ಯಾಲಯಗಳ ವ್ಯಾಪ್ತಿಯ 400ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಲಿದ್ದು, ಮೈಸೂರು ಭಾಗದಲ್ಲೇ 250 ಕಾಲೇಜುಗಳು ಭಾಗವಹಿಸಲಿವೆ. ಪ್ರತಿದಿನ 20 ತಂಡಗಳು ಪ್ರದರ್ಶನ ನೀಡಲಿದ್ದು, ಪ್ರತಿ ತಂಡಕ್ಕೆ 7-10 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಪ್ರತಿ ತಂಡದಲ್ಲಿ 30ರಿಂದ 40 ಕಲಾವಿದರಿಗೆ ಅವಕಾಶ ನೀಡಲಾಗಿದೆ. 8 ದಿನಗಳ ಕಾರ್ಯಕ್ರಮದಲ್ಲಿ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶಿಸಲಿದ್ದಾರೆ ಎಂದು ಎಸ್ಪಿ ವಿವರಿಸಿದರು.
20 ವಸ್ತು ವಿಷಯ: ಈ ಬಾರಿಯ ಯುವ ಸಂಭ್ರಮಕ್ಕೆ ಭಾರತ ಸ್ವಾತಂತ್ರ್ಯ ಚಳವಳಿ ಹಾಗೂ ಕರ್ನಾಟಕ ಏಕೀಕರಣ, ಮೊಬೈಲ್‌ನಿಂದ ಪುಸ್ತಕದೆಡೆಗೆ ಯುವಜನತೆ ನಡಿಗೆ, ಚಂದ್ರಯಾನ-3ರ ಹಿನ್ನೆಲೆಯಲ್ಲಿ ವೈಜ್ಞಾನಿಕ ಪ್ರಗತಿಗೆ ಮೈಸೂರು ಸಂಸ್ಥಾನದ ಕೊಡುಗೆ, ಮಾದರಿ ಕರ್ನಾಟಕವಾಗುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರ, ರಾಷ್ಟ್ರೀಯ ಭಾವೈಕ್ಯತೆ-ವಿವಿಧತೆಯಲ್ಲಿ ಏಕತೆ, ಮೈಸೂರು ದಸರಾ ವೈಭವ ಅಂದು-ಇಂದು, ಸುಳ್ಳು ಸುದ್ದಿ ಪರಿಣಾಮ ಮತ್ತು ನಿಯಂತ್ರಣ, ಆಧುನಿಕ ಸ್ಪರ್ಧಾ ಜಗತ್ತಿಗೆ ಶಿಕ್ಷಣವೇ ಮೂಲಮಂತ್ರ, ಮಾದಕ ವ್ಯಸನ ಮುಕ್ತ ಸಮಾಜದೆಡೆಗೆ ಯುವಜನತೆಯ ನಿಲುವು ಸೇರಿದಂತೆ 20 ವಸ್ತು ವಿಷಯಗಳನ್ನು ನೀಡಲಾಗಿದೆ. ಈ ಆಶಯಗಳನ್ನಿಟ್ಟುಕೊಂಡು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಯುವ ಸಂಭ್ರಮದಲ್ಲಿ ನಿತ್ಯ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳನ್ನು ಆಯ್ಕೆ ಮಾಡಿ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುವ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕಲಾವಿದರನ್ನು ಗೌರವಿಸುವುದರ ಜತೆಗೆ, ಪ್ರಯಾಣ ಭತ್ಯೆ, ವಸ್ತ್ರವಿನ್ಯಾಸದ ಖರ್ಚುವೆಚ್ಚ ನೀಡಲಾಗುತ್ತದೆ. ದೂರದಿಂದ ಬಂದವರಿಗೆ ಮಾತ್ರ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.
ಸಮಿತಿಯ ಕಾರ್ಯಾಧ್ಯಕ್ಷೆ ವಿ.ಆರ್.ಶೈಲಜಾ, ಕಾರ್ಯದರ್ಶಿ ಆರ್.ಪ್ರತಾಪ್, ಸಹ ಕಾರ್ಯದರ್ಶಿ ಡಾ.ಆರ್.ನಿಂಗರಾಜು ಇದ್ದರು.
ಕ್ವೋಟ್..
ಯುವ ಸಂಭ್ರಮದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಳೆದ ಬಾರಿ 2.3 ಕೋಟಿ ರೂ. ಖರ್ಚಾಗಿತ್ತು. ಈ ವರ್ಷ ಬರ ಇರುವುದರಿಂದ ಕಡಿಮೆ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಸೀಮಾ ಲಾಟ್ಕರ್, ಯುವ ಸಂಭ್ರಮ ಉಪಸಮಿತಿ ವಿಶೇಷಾಧಿಕಾರಿ