ಮಂಗಳೂರು: ಸುರತ್ಕಲ್ ಜೋಕಟ್ಟೆಯ ಗುಡ್ಡೆ ಎಂಬಲ್ಲಿ ಭಾರೀ ಗಾಳಿ ಮಳೆಗೆ ಮನೆಯ ಮೇಲೆ ಗುರುವಾರ ಬೆಳಗ್ಗಿನ ಜಾವ ತಡೆಗೋಡೆ ಕುಸಿದು ಬಿದ್ದು 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಸಂಬಂಧಿಕರ ಮನೆಗೆ ಅತಿಥಿಯಾಗಿ ಬಂದಿದ್ದ ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶಂಕರ ಎಂಬವರ ಪುತ್ರ ಶೈಲೇಶ್ (17) ಸಾವನ್ನಪ್ಪಿದ್ದಾನೆ. ದೊಡ್ಡಮ್ಮನ ಮಗಳ ಮನೆಗೆ ಬಂದಿದ್ದ ಶೈಲೇಶ್ ರಾತ್ರಿ ಊಟ ಮಾಡಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದ. ಶೈಲೇಶ್ ಅವರ ದೊಡ್ಡಮ್ಮನ ಮಗಳು ಸವಿತಾ, ಆಕೆಯ ಗಂಡ ಸುರೇಶ್ ಹಾಗೂ ಮಗು ಸಾಕ್ಷಿ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು.
ತಡರಾತ್ರಿ ಭಾರೀ ಮಳೆಯಾಗುತ್ತಿದ್ದಾಗ ಪಕ್ಕದ ತಡೆಗೋಡೆ ಮನೆ ಮೇಲೆ ಕುಸಿದು ಬಿದ್ದಿದ್ದು ಮನೆ ನೆಲಸಮವಾಗಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಹಂಚು ಬಿದ್ದಿದ್ದು ಈ ವೇಳೆ ಶೈಲೇಶ್ ತೀವ್ರ ಗಾಯಗೊಂಡಿದ್ದ. ಅಗ್ನಿ ಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಒಯ್ದಿದ್ದಾರೆ.
ಶೈಲೇಶ್ ಮಲಗಿದ್ದ ಕೋಣೆಗೆ ಹೆಚ್ಚು ಮಣ್ಣು, ಕಲ್ಲು ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಸವಿತಾ ಅವರಿಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.