ಗುಳೇದಗುಡ್ಡ: ಪಟ್ಟಣದಲ್ಲಿ ನಾಗಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆಯರು ಹುತ್ತಿನ ಮಣ್ಣಿನಿಂದ ನಾಗಪ್ಪನನ್ನು ತಯಾರಿಸಿ ಹಾಲೆರೆದು ಪೂಜಿಸಿದರು. ಇನ್ನೊಂದೆಡೆ ಊರಿನ ಹೊರಭಾಗದಲ್ಲಿನ ಹುತ್ತಗಳಿಗೆ ಹಾಲೆರೆದು ನೈವೇದ್ಯ ಅರ್ಪಿಸಲಾಯಿತು.
ಮಹಿಳೆಯರು, ಮಕ್ಕಳು, ಯುವಕರು ಜೋಕಾಲಿ ಆಡಿ ಸಂಭ್ರಮಿಸಿದರು.
ಪಟ್ಟಣದ ಬನ್ನಿಕಟ್ಟಿ ಬಳಿಯ ತ್ರೈಂಬಕೇಶ್ವರ ದೇವಸ್ಥಾನ ಸಮೀಪ ಅಪರೂಪದ ಜೋಕಾಲಿಗಳನ್ನು ಕಟ್ಟಲಾಗಿತ್ತು. ಪ್ರತಿ ಜೋಕಾಲಿಯೂ ಒಂದೊಂದು ವಿಶೇಷತೆ ಹೊಂದಿದ್ದು, ಸಾಮಾನ್ಯವಾಗಿ ಮರಕ್ಕೆ ಕಟ್ಟಿ ಜೀಕುವ ಜೋಕಾಲಿ, ಏಣಿ ಹತ್ತುವ ಮಂಗನ ಜೋಕಾಲಿ, ತಮ್ಮ ಭಾರ ತಾವೇ ಹೊತ್ತು ಮೇಲೇರುವ ಜೋಕಾಲಿ, ಗಿರಿಗಿರಿ ತಿರುಗುವ ಗಾಣದ ಜೋಕಾಲಿ ಸೇರಿ ವಿವಿಧ ಜೋಕಾಲಿಗಳು ಗಮನ ಸೆಳೆದವು. ನಾಗರಪಂಚಮಿಯಿಂದ ಹಿಡಿದು ನಾಲ್ಕಾರು ದಿನಗಳವರೆಗೆ ಇಲ್ಲಿ ಜೋಕಾಲಿ ಆಡುವ, ನೋಡಿ ಮನರಂಜನೆ ಪಡುವ ಜನರ ಹಿಂಡು ತುಂಬಿರುತ್ತದೆ.
ಏಣಿಯಂತೆ ಕಾಣುವ ಮಂಗನ ಜೋಕಾಲಿ ಏರಲು ಬ್ಯಾಲನ್ಸ್ ಅವಶ್ಯ. ಸ್ವಲ್ಪವೇ ಬ್ಯಾಲನ್ಸ್ ತಪ್ಪಿದರೂ ಜೋಕಾಲಿ ಏರಿದವರನ್ನು ಲಗಾಟ ಹೊಡೆಸುತ್ತದೆ.
ದು ವಿಶೇಷವಾಗಿ ಮಕ್ಕಳನ್ನು ಆಕರ್ಷಿಸುತ್ತದೆ. ತಮ್ಮ ಭಾರವನ್ನು ತಾವೇ ಹೊತ್ತು ಮೇಲೇರುವ ಗಡೆಗಡಿ ಜೋಕಾಲಿಯ ಮೇಲೆರಲು ಶಕ್ತಿಯ ಜೊತೆಗೆ ಹಿಡಿತವೂ ಮುಖ್ಯ.
ಇದನ್ನೂ ಓದಿ: ಮೈಗೂರಲ್ಲಿ ಅದ್ದೂರಿ ತೆಪ್ಪದ ರಥೋತ್ಸವ
ಗಿಡದಿಂದ ಜೋತು ಬಿಟ್ಟ ಹಗ್ಗಕ್ಕೆ ಕಟ್ಟಿದ ಗೇಣುದ್ದದ ಕಟ್ಟಿಗೆಯ ಮೇಲೆ ಕುಳಿತು ಹಗ್ಗದ ಇನ್ನೊಂದು ತುದಿ ಹಿಡಿದು ಜಗ್ಗುತ್ತ ಮೇಲೇರಬೇಕು. ಹಗ್ಗದ ಹಿಡಿತ ಸ್ವಲ್ಪವೇ ತಪ್ಪಿದರೂ ಸಾಕು ಕುಳಿತವರನ್ನು ಕೆಳಗೆ ಹಾಕುತ್ತದೆ ಇದು.
ಹೀಗೆ ಬೀಳುವವರಗೆ ಪೆಟ್ಟಾಗದಂತೆ ಕೆಳಗೆ ಮರಳು ಹಾಕಿರುತ್ತಾರೆ. ಈ ಜೋಕಾಲಿಯನ್ನು ಏರಲು ಹೋಗಿ ಕೆಳಗೆ ಬೀಳುವವರನ್ನು ನೋಡಿ ಮನರಂಜನೆ ಪಡೆಯವ ಜನರು ಜೋಕಾಲಿ ಸುತ್ತಲೂ ನೆರೆದಿರುತ್ತಾರೆ. ಇದನ್ನೇ ಬಾಳೆಹಣ್ಣು ಜೋಕಾಲಿ ಎಂದು ಹೇಳುವರು.
ಈ ಜೋಕಾಲಿ ಏರುವವರಿಗಿಂತ ನೋಡುವವರಿಗೆ ಹೆಚ್ಚಿನ ಮನರಂಜನೆ ನೀಡುತ್ತದೆ. ಗಾಣದಂತೆ ಕಂಬವನ್ನು ನೆಟ್ಟು, ಇದಕ್ಕೆ ಎರಡು ಸಣ್ಣ ಜೋಕಾಲಿ ಕಟ್ಟಿ ಅದರೊಳಗೆ ಕುಳಿತು ಗಿರಗಿರನೆ ತಿರುವುಗುವ ಜೋಕಾಲಿ ಮಕ್ಕಳಿಗೆ ಅಚ್ಚುಮೆಚ್ಚು.
ಇನ್ನು ಮರಕ್ಕೆ ಕಟ್ಟುವ ಜೀಕುವ ಜೋಕಾಲಿ ಯುವಕರು, ಯುವತಿಯರು, ದೊಡ್ಡವರನ್ನು ಸೆಳೆಯುತ್ತದೆ. ಹೀಗೆ ನಾಲ್ಕಾರು ದಿನಗಳವರೆಗೆ ಜೋಕಾಲಿ ಆಡುವ, ನೋಡಿ ಮನರಂಜನೆ ಅನುಭವಿಸುವ ಜನರಿಂದ ಬನ್ನಿಕಟ್ಟಿ ಪ್ರದೇಶ ತುಂಬಿರುತ್ತದೆ.
ಜೋಕಾಲಿಗಳು ಅಪರೂಪವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಬಗೆಬಗೆಯ ಜೋಕಾಲಿಗಳನ್ನು ಕಟ್ಟುವ ಮೂಲಕ ಹಿಂದಿನ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ತ್ರ್ತ್ರೈಂಬಕೇಶ್ವರ ದೇವಸ್ಥಾನ ಸಮಿತಿಯ ಕಾರ್ಯ ಶ್ಲಾಘನಿಯವಾಗಿದೆ.