ಬೆಳಗಾವಿ: ಆರ್‌ಟಿಸಿಯಲ್ಲಿ (ಉತಾರ) ಜಂಟಿ ಮಾಲೀಕತ್ವ ಹೊಂದಿರುವ ಎಲ್ಲ ರೈತರಿಗೆ ಸಮನಾಂತರವಾಗಿ ಆರ್ಥಿಕ ನೆರವು ವಿಂಗಡಿಸಿ, ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಅತಿ ವೃಷ್ಟಿ, ಕೋವಿಡ್-19 ಲಾಕ್‌ಡೌನ್ ಇನ್ನಿತರ ಕಾರಣ ಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಮುಸುಕಿನ ಜೋಳ ಬೆಳೆದ 7.30 ಲಕ್ಷ ರೈತರಿಗೆ ತಲಾ 5 ಸಾವಿರ ರೂ. ಆರ್ಥಿಕ ನೆರವನ್ನು ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಸುಮಾರು 1.5 ಲಕ್ಷಕ್ಕೂ ಅಧಿಕ ರೈತರ ಆರ್‌ಟಿಸಿಯಲ್ಲಿ ಒಂದಕ್ಕಿಂತ ಹೆಚ್ಚಿನ ರೈತರ ಹೆಸರು ನಮೂದು ಇದೆ. ಹೀಗಾಗಿ ಜಂಟಿ ಖಾತೆ ಹೊಂದಿದ ರೈತರಿಗೆ ಆರ್ಥಿಕ ನೆರವು ಸಿಗುತ್ತಿರಲಿಲ್ಲ.
ರಾಜ್ಯದಲ್ಲಿ ಜಂಟಿ ಮಾಲೀಕತ್ವದ ಖಾತೆ ಹೊಂದಿರುವ 80 ಸಾವಿರಕ್ಕೂ ಅಧಿಕ ರೈತರು ಒಬ್ಬರ ಖಾತೆಗೆ ಪರಿಹಾರ ಜಮೆಮಾಡುವ ಕುರಿತು ಒಪ್ಪಿಗೆ ಪತ್ರವನ್ನೂ ನೀಡಿರಲಿಲ್ಲ. ಇದೇವೇಳೆ ಜಂಟಿ ಮಾಲೀಕತ್ವ ಹೊಂದಿದ್ದರೂ ಕೆಲ ರೈತರು ಓರ್ವ ರೈತನಿಗೆ ನೆರವು ಕೊಡಲು ಅನುಮತಿ ನೀಡಿದ್ದಾರೆ.
ವಿತರಣೆಯಾಗದ ಅನುದಾನ: ಸರ್ಕಾರಿ ನಿಯಮದ ಪ್ರಕಾರ 2020-21ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆಗಾರರ ಸಮೀಕ್ಷೆ ತಂತ್ರಾಂಶದಲ್ಲಿ ಲಾನುಭವಿಗಳ ಹೆಸರು ನೋಂದಾಯಿಸಲಾಗಿತ್ತು. ಆದರೆ, ಜಂಟಿ ಮಾಲೀಕತ್ವ ಹೊಂದಿದ್ದರೂ ಒಬ್ಬರಿಗೆ ಮಾತ್ರ ಆರ್ಥಿಕ ನೆರವು ನೀಡಲಾಗುತ್ತಿತ್ತು. ಹೀಗಾಗಿ ಜಂಟಿ ರೈತರಲ್ಲಿ ಓರ್ವ ಮಾತ್ರ ನೋಟರಿ ದೃಢೀಕೃತ 20 ರೂ. ಬಾಂಡ್‌ನಲ್ಲಿ ಇನ್ನೋರ್ವ ರೈತನ ಒಪ್ಪಿಗೆ ಪತ್ರ ಪಡೆದುಕೊಳ್ಳುವುದು ಕಡ್ಡಾಯವಾಗಿತ್ತು. ಆದರೆ, ಜಂಟಿ ಮಾಲೀಕತ್ವ ಇದ್ದರೂ ರೈತರು ಸಹಾಯಧನಕ್ಕಾಗಿ ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ನೀಡಿ ಅರ್ಜಿ ಸಲ್ಲಿಸಿದ್ದರು. ಆದರೆ, ಒಂದೇ ಆರ್‌ಟಿಸಿಯಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡಲು ಅವಕಾಶ ಇಲ್ಲದ್ದರಿಂದ ಕೋಟ್ಯಂತರ ರೂ. ಅನುದಾನ ವಿತರಣೆಯಾಗದೆ ಬಾಕಿ ಉಳಿದಿದೆ.
ಒಂದು ಆರ್‌ಟಿಸಿಯಲ್ಲಿ ಒಂದಕ್ಕಿಂತ ಹೆಚ್ಚು ರೈತರ ಹೆಸರು ನಮೂದು ಇದ್ದರೆ ಅದರಲ್ಲಿ ಒಬ್ಬ ರೈತ ಮಾತ್ರ ಆರ್ಥಿಕ ನೆರವು ಪಡೆಯಲು ಇನ್ನ್ನುಳಿದ ರೈತರಿಂದ ಒಪ್ಪಿಗೆ ಪತ್ರ ಪಡೆದು ಕೃಷಿ ಇಲಾಖೆಗೆ ನೀಡಬೇಕು. ಈ ನಿಯಮಕ್ಕೆ ಜಂಟಿ ಮಾಲೀಕತ್ವದ ರೈತರು ಸಮ್ಮತಿ ನೀಡುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಜಂಟಿ ಖಾತೆ ಹೊಂದಿರುವ ರೈತರು, ಇನ್ನೊಬ್ಬ ರೈತನ ಖಾತೆಗೆ ಸಹಾಯಧನ ಕೊಡಲು ಒಪ್ಪಿಗೆ ಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಈ ಸಮಸ್ಯೆ ನಿವಾರಿಸಲು ಇದೀಗ ಜಂಟಿ ಮಾಲೀಕತ್ವ ಇದ್ದರೂ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ.
ಆರ್‌ಟಿಸಿಯಲ್ಲಿ ಜಂಟಿ ಮಾಲೀಕತ್ವ ಇದ್ದರೆ ಆಗಸ್ಟ 31ರ ಒಳಗಾಗಿ ಒಪ್ಪಿಗೆ ಪತ್ರ ನೀಡುವಂತೆ ಸರ್ಕಾರ ತಿಳಿಸಿತ್ತು. ಆದರೆ, ಸಾವಿರಾರು ರೈತರು ಪತ್ರ ನೀಡಿಲ್ಲ. ಹೀಗಾಗಿ ಜಂಟಿ ಮಾಲೀಕತ್ವ ಇರುವ ಜಿಲ್ಲೆಯ ರೈತರ ದಾಖಲೆ ಪಡೆದು ತಂತ್ರಾಂಶದಲ್ಲಿ ಮತ್ತೆ ದಾಖಲಿಸಿ ಸಮನಾಂತರವಾಗಿ ಸಹಾಯಧನ ವಿಂಗಡಿಸಿ ರೈತರ ಖಾತೆಗೆ ವರ್ಗಾವಣೆ ಮಾಡಲು ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.| ಶಿವನಗೌಡ ಪಾಟೀಲ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬೆಳಗಾವಿ ಜಿಲ್ಲೆ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ