ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಮತ್ತಿತರರಿದ್ದಾರೆ.  
ಜಿಲ್ಲೆ

ಬೆಳೆ ಹಾನಿ ಜಂಟಿ ಸಮೀಕ್ಷೆ ಆರಂಭ, ಸಮಗ್ರ ವರದಿ ಸಲ್ಲಿಸಲು ಡಿಸಿ ಡಾ. ಆನಂದ ಕೆ ಸೂಚನೆ

ವಿಜಯಪುರ: ಮಳೆ ಹಾನಿಗೆ ಸಂಬಂಧಿಸಿದಂತೆ ಈಗಾಗಲೇ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಎರಡು ದಿನಗಳಲ್ಲಿ ಬೆಳೆ ಹಾನಿಯ ಸಮಗ್ರ ವರಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ವಿಪತ್ತು ನಿರ್ವಹಣಾ ಕುರಿತ ಸಭೆ ನಡೆಸಿದ ಅವರು, ಬೆಳೆ ಹಾನಿ ಅನುಭವಿಸಿದ ರೈತರ ಪಟ್ಟಿ ಸಿದ್ದಪಡಿಸಿ, ಪಟ್ಟಿಯನ್ನು ರೈತರ ಅವಗಾಹನೆಗಾಗಿ ಆಯಾ ಗ್ರಾಮ ಪಂಚಾಯಿತಿಯ ಸೂಚನಾ ಫಲಕದಲ್ಲಿ ಪಟ್ಟಿಯನ್ನು ಪ್ರಚುರ ಪಡೆಸಬೇಕು. ಬೆಳೆ ಹಾನಿ ಪಟ್ಟಿ ಪ್ರಕಟಿಸಿದ 7 ದಿನದೊಳಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಕಾಲಾವಕಾಶ ಕಲ್ಪಿಸಿ, ರೈತರು ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದರು.

ಮನೆಹಾನಿ ಪ್ರಕರಣಗಳಲ್ಲಿ ಯಾವುದೇ ಬಾಕಿ ಉಳಿಸಿಕೊಳ್ಳದೆ 72 ಗಂಟೆಗಳಲ್ಲಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ಎದುರಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಮುನ್ನೆಚ್ಚಢರಿಕೆಯಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮಳೆ ಬರುವ ಸೂಚನೆಯಿದ್ದಾಗ ಅಪಾಯದ ಮುನ್ಸೂಚನೆಯ ಬಗ್ಗೆ ನದಿ, ಹಳ್ಳ-ಕೊಳ್ಳಗಳಿರುವ ಸ್ಥಳಗಳಲ್ಲಿ ನಿಗಾ ವಹಿಸಲು ಕ್ರಮ ಕೈಗೊಳ್ಳಬೇಕು. ಅಪಾಯ ಮುನ್ಸೂಚನೆಯ ಸೂಚನಾ ಫಲಕಗಳನ್ನು ಸಾರ್ವಜನಿಕರ ತಿಳಿವಳಿಕೆಗಾಗಿ ಅಳವಡಿಸಬೇಕು ಎಂದರು.

ಜಿಲ್ಲೆಯಲ್ಲಿ ಎದುರಾಗಬಹುದಾದ ಪ್ರಕೃತಿ ವಿಕೋಪ ನಿಯಂತ್ರಣ ಕ್ರಮ ಕೈಕೊಳ್ಳುವುದಕ್ಕಾಗಿ ಆಗಾಗ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಜರುಗಿಸಲಾಗಿದೆ. ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ಮೂಲಕ ವಿಪತ್ತು ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಸೂಚನೆ ನೀಡಿದರು.

ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ನಿಯೋಜಿಸಿದ ತಾಲೂಕಿಗೆ ಆಗಾಗ ಭೇಟಿ ನೀಡಿ, ಅತಿವೃಷ್ಟಿಯಿಂದ ಉಂಟಾಗಬಹುದಾದ ಸ್ಥಳಗಳ ಮಾಹಿತಿಯನ್ನು ಪಡೆದು ಪ್ರತಿ 15 ದಿನಗಳಿಗೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಸಭೆ ನಡೆಸಬೇಕು ಹಾಗೂ ತಾಲೂಕು ಕೇಂದ್ರದಲ್ಲಿ 24*7 ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಸೂಚನೆ ನೀಡಿದ ಅವರು, ಸಾರ್ವಜನಿಕರ ತುರ್ತಾಗಿ ಸಂಪರ್ಕಿಸಲು ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸ್ಥಾಪಿಸಿರುವ ಸಹಾಯವಾಣಿ ಸಂಖ್ಯೆ 1077 ಅಥವಾ ವಿಪತ್ತು ನಿರ್ವಹಣಾ ಪರಿಣಿತರ ಸಂಖ್ಯೆ 7019682740 ಗೆ ಸಂಪರ್ಕಿಸಬಹುದಾಗಿದೆ ಎಂದರು.

ರಕ್ಷಣಾ ಸಾಮಗ್ರಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದರೊಂದಿಗೆ ಈಜುಗಾರರು, ಹಾವಾಡಿಗರು, ಸ್ವಯಂ ಸೇವಕ ಸಂಘಗಳ ಮಾಹಿತಿಯನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸಿಇಒ ರಿಷಿ ಆನಂದ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರಾಹುಲ್ ಬಾವಿದೊಡ್ಡಿ ಮತ್ತಿತರರಿದ್ದರು.