ಸೋಮವಾರಪೇಟೆ ಸಮೀಪದ ಮುಕ್ಕೊಡ್ಲು ಗ್ರಾಮದಲ್ಲಿ ಕೆ.ಪಿ.ನಾಣಿಯಪ್ಪ ಅವರಿಗೆ ಸೇರಿದ ಜಾಗವನ್ನು ಜಂಟಿ ಸರ್ವೇ ಮಾಡುತ್ತಿರುವ ಅಧಿಕಾರಿಗಳು. ಆರ್‌ಎಫ್‌ಒ ದಿನೇಶ್, ಭೂಮಾಪಕ ಪ್ರದೀಪ್ ಮತ್ತಿತರು ಇದ್ದರು.  
ಜಿಲ್ಲೆ

ವಿವಿಧ ಇಲಾಖೆಯಿಂದ ಜಂಟಿ ಸರ್ವೇ

ನಾಗೇಶ ಎಸ್

ಸೋಮವಾರಪೇಟೆ: ಮಡಿಕೇರಿ ತಾಲೂಕಿನ ಮುಕ್ಕೊಡ್ಲು ಗ್ರಾಮದ ಕೃಷಿಕ ನಾಣಿಯಪ್ಪ ಅವರ ಕೃಷಿ ಭೂಮಿಯಲ್ಲಿ ಏಲಕ್ಕಿ, ಕಾಫಿ ಗಿಡಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಕಡಿದು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿವಿಧ ಇಲಾಖೆಯಿಂದ ಮಂಗಳವಾರ ಜಂಟಿ ಸರ್ವೇ ನಡೆಯಿತು.

ಮುಕ್ಕೊಡ್ಲು ಗ್ರಾಮದ ಸ.ನಂ.33/2 ರ ಕೆ.ಪಿ.ನಾಣಿಯಪ್ಪ ಅವರಿಗೆ ಸೇರಿದ ಜಾಗದಲ್ಲಿ ಬೆಳೆದಿದ್ದ ಏಲಕ್ಕಿ ಮತ್ತು ಕಾಫಿ ಗಿಡಗಳನ್ನು ಮಡಿಕೇರಿ ಅರಣ್ಯ ಸಂಚಾರ ದಳದ ಆರ್‌ಎಫ್‌ಒ ಮತ್ತು ಸಿಬ್ಬಂದಿ ಒತ್ತುವರಿ ಅರೋಪದಲ್ಲಿ ಕಡಿದು ನಾಶಪಡಿಸಿದ್ದರು ಎಂದು ಕೊಡಗು ಅರಣ್ಯ ಸಂರಕ್ಷಣಾಧಿಕಾರಿಗೆ ನಾಣಿಯಪ್ಪ ದೂರು ಸಲ್ಲಿಸಿದ್ದರು. ನಂತರ ರೈತ ಹೋರಾಟ ಸಮಿತಿಯವರು ನಾಣಿಯಪ್ಪ ಪರವಾಗಿ ಮಡಿಕೇರಿ ಅರಣ್ಯ ಭವನದ ಮುಂದೆ ಪ್ರತಿಭಟನೆ ನಡೆಸಿದ್ದರು.

ಅರಣ್ಯ ಸಂರಕ್ಷಣಾಧಿಕಾರಿ ಅದೇಶದಂತೆ ಮಡಿಕೇರಿ ಅರಣ್ಯ ಸಂಚಾರ ದಳ, ವಲಯ ಅರಣ್ಯಾಧಿಕಾರಿ, ಭೂದಾಖಲೆಗಳ ಸಹಾಯಕ ನಿದೇರ್ಶಕರು, ಮಡಿಕೇರಿ ತಾಲೂಕು ಕಚೇರಿ ಸಿಬ್ಬಂದಿ ಹಾಗು ಪಂಚಾಯಿತಿದಾರರ ಸಮಕ್ಷಮದಲ್ಲಿ ಜಂಟಿ ಸರ್ವೇ ನಡೆಸಿ, ದೂರುದಾರರ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಅಕ್ಕಪಕ್ಕದ ಹಿಡುವಳಿದಾರರ ಹೇಳಿಕೆಗಳನ್ನು ಪಡೆಯಲಾಯಿತು. ನಾಣಿಯಪ್ಪ ಹಾಗೂ ಅವರ ಮಗಳು ಹರಿಣಿ ಜಾಗವನ್ನು ತೋರಿಸಿಕೊಟ್ಟಂತೆ ಚೈನ್ ಎಳೆದು ಜಿ.ಪಿ.ಎಸ್. ರೀಡಿಂಗ್ ಪಡೆದುಕೊಂಡು ಮೋಜಣಿ ಕಾರ್ಯಕೈಗೊಳ್ಳಲಾಯಿತು.