ಎಂಎಲ್‌ಪಿ 26-1, ಎಂಎಲ್‌ಪಿ 26-1ಎ ಮಹಾಲಿಂಗಪುರದ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರು ಅಕ್ಕಿಮರಡಿ ಗ್ರಾಮದ ರೈತ ಮಲ್ಲಪ್ಪ ಬೋರಡ್ಡಿ ಅವರಿಂದ 36 ಲಕ್ಷ ರೂಗಳಿಗೆ ಖರೀದಿಸಿದ ಜೋಡೆತ್ತುಗಳು. 
ಜಿಲ್ಲೆ

36 ಲಕ್ಷ ರೂಗಳಿಗೆ ಜೋಡೆತ್ತು ಖರೀದಿ

Vijayapura - Desk - Gurappa Lokuri

ಮಹಾಲಿಂಗಪುರ: ಸ್ಥಳೀಯ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಅವರು ಅಕ್ಕಿಮರಡಿಯ ರೈತ ಮಲ್ಲಪ್ಪ ಬೋರಡ್ಡಿ ಅವರಿಂದ 36 ಲಕ್ಷ ರೂಗಳಿಗೆ ಜೋಡೆತ್ತು ಖರೀದಿಸಿ ತಮ್ಮ ಪ್ರಾಣಿ ಪ್ರೇಮ ಮೆರೆದಿದ್ದಾರೆ.

ಪ್ರತಿ ವರ್ಷ ಜಾನುವಾರು ಜಾತ್ರೆ ಬತ್ತೆಂದರೆ ಗೌಡರಿಗೆ ಎಲ್ಲಿಲ್ಲದ ಸಂಭ್ರಮ. ಜಾತ್ರೆಯಲ್ಲಿ ಎತ್ತು ಮತ್ತು ಹೋರಿಗಳಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಅಲ್ಲಿ ರಾಜ್ಯದ ಗ್ರಾಮೀಣ ಕ್ರೀಡೆಗಳಾದ ಕಲ್ಲು ಜಗ್ಗುವುದು, ತೆರೆಬಂಡಿ ಸ್ಪರ್ಧೆ ಏರ್ಪಡಿಸಿ ಜಾನುವಾರುಗಳಿಗೂ ಬೆಲೆ ಬರುವಂತೆ ಮಾಡಿ ರೈತರೊಂದಿಗೆ ತಾವೂ ಖುಶಿ ಪಡುತ್ತಾರೆ. ಈಗಾಗಲೇ ಇವರಲ್ಲಿ 11 ಲಕ್ಷ ರೂ. ಮತ್ತು 14 ಲಕ್ಷ ರೂಗಳಿಗೆ ಖರೀದಿಸಿದ ಎರಡು ತೆರೆಬಂಡಿ ಎತ್ತುಗಳಿವೆ. ಈ ಹೊಸ ಅತಿಥಿಗಳ ಆಗಮನದಿಂದಾಗಿ ಅವರಲ್ಲಿರುವ ಎತ್ತುಗಳ ಬೆಲೆ 61 ಲಕ್ಷ ರೂಳಾಗಿದೆ.

ಇಂತಹ ಮಹತ್ವಾಕಾಂಕ್ಷಿ ಎತ್ತುಗಳನ್ನು ಸಾಕುವುದು ಸುಲಭದ ಕೆಲಸವಲ್ಲ. ಅವುಗಳಿಗಾಗಿಯೇ ಪ್ರತ್ಯೇಕ ಶೆಡ್, ಕೆಳಗೆ ಉತ್ತಮ ಗುಣಮಟ್ಟದ ಮ್ಯಾಟ್, ಗಾಳಿ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಅವುಗಳಿಗೆ ಆಹಾರವಾಗಿ ದಿನನಿತ್ಯ ದಾನ್ಯದ ಹಿಟ್ಟು ಕಲಿಸಿದ ನೀರು, ಗೋಧಿಯ ಹಿಟ್ಟಿನ ಸಜ್ಜಕ, ಸತ್ವಯುತ ಮತ್ತು ಶಕ್ತಿಯುತ ಮೇವು, ವ್ಯವಸ್ಥಿತ ವೈದ್ಯಕೀಯ ಪರೀಕ್ಷೆ ಹೀಗೆ ದಿನಾಲೂ ಅವುಗಳಿಗೆ ಸಾವಿರಾರು ರೂ. ಖರ್ಚು ತಗಲುತ್ತದೆ. ಆದರೆ, ಎತ್ತುಗಳನ್ನು ಸಾಕುವ ಹವ್ಯಾಸ ಹೊಂದಿರುವ ರೈತರು ಈ ಯಾವ ಖರ್ಚಿನ ಬಗ್ಗೆ ತಲೆ ಕೆಡಿಸಿಕೊಳ್ಳದೆ ಅವುಗಳನ್ನು ಜೋಪಾನವಾಗಿ ಬೆಳೆಸುವಲ್ಲಿ ಮಾತ್ರ ಆಸಕ್ತಿ ಹೊಂದಿರುತ್ತಾರೆ.

ನನ್ನ ಹಾಗೆ ಎತ್ತುಗಳನ್ನು ಸಾಕುವ ಹಾಗೂ ಅವುಗಳನ್ನು ಸ್ಪರ್ಧೆಗೊಡ್ಡಿ ಖುಶಿ ಪಡುವ ಇಲ್ಲಿಗೆ ಸಮೀಪದ ಅಕ್ಕಿಮರಡಿ ಗ್ರಾಮದ ಮಲ್ಲಪ್ಪ ಬೋರಡ್ಡಿ ಅವರ ಎತ್ತುಗಳು ಮೂರ‌್ನಾಲ್ಕು ವಷಗಳಲ್ಲಿ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ದಾಖಲೆ ನಿರ್ಮಿಸಿದ್ದವು. ಹೀಗಾಗಿ ಅವುಗಳನ್ನು ಖರೀದಿಸಲು ನಮಗೆ ಇಷ್ಟವಾಯಿತು ಎನ್ನುತ್ತಾರೆ ಯಲ್ಲನಗೌಡರು. ಯಲ್ಲನಗೌಡರ ಈ ಕಾರ್ಯಕ್ಕೆ ಅವರ ಸಹೋದರರಾದ ಕೃಷ್ಣಗೌಡ, ವಿಠ್ಠಲಗೌಡ ಹಾಗೂ ನಾರಾಯಣಗೌಡ ಸಾಥ್ ನೀಡುತ್ತಿದ್ದಾರೆ.

ಅಂದಾಜು 25 ವರ್ಷಗಳಿಂದ ನಾನು ರಾಜಕೀಯ ಕ್ಷೇತ್ರದಲ್ಲಿದ್ದರೂ, ಒಬ್ಬ ರೈತನಾಗಿ ಜಾನುವಾರುಗಳ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ.
ಯಲ್ಲನಗೌಡ ಪಾಟೀಲ, ಪುರಸಭೆ ಅಧ್ಯಕ್ಷ, ಮಹಾಲಿಂಗಪುರ