ಜಿಲ್ಲೆ

ದಕ್ಷಿಣ ಕನ್ನಡ ಅಪರಾಧ ಕೃತ್ಯಗಳ ವಿರುದ್ಧ ಜಂಟಿ ಕಾರ್ಯಾಚರಣೆ ನೂತನ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು ದ.ಕ. ಜಿಲ್ಲೆಯ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಅಥವಾ ಕಾನೂನು ಬಾಹಿರ ಚಟುವಟಿಕೆಗಳು ನಡೆದಾಗ ಅದನ್ನು ಜಂಟಿ ಪೊಲೀಸ್ ಕಾರ್ಯಾಚರಣೆಯ ಮೂಲಕ ನಿಭಾಯಿಸಲಿದ್ದೇವೆ ಎಂದು ಮಂಗಳೂರಿನ ನೂತನ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ರಿಮಿನಲ್‌ಗಳು ಜಿಲ್ಲೆಯ ಯಾವುದೇ ಮೂಲೆಯಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯ ಎಸಗಿದರೂ ಎಸ್ಪಿ, ಡಿಸಿಪಿಗಳ ಜತೆ ಜಂಟಿ ಕಾರ್ಯಾಚರಣೆ ಮೂಲಕ ಆರೋಪಿಗಳಿಗೆ ತಕ್ಕ ಉತ್ತರ ನೀಡಲಾಗುವುದು. ಈ ಕಾರ್ಯಾಚರಣೆ ಇತರ ಅಕ್ರಮ ಚಟುವಟಿಕೆಗಳಿಗೂ ಅನ್ವಯವಾಗಲಿದೆ ಎಂದವರು ಹೇಳಿದರು.

ಈ ಸಂದರ್ಭ ಜತೆಯಲ್ಲಿದ್ದ ಎಸ್ಪಿ ಡಾ.ಅರುಣ್ ಕೆ. ಸಹಮತ ವ್ಯಕ್ತಪಡಿಸಿ, ಅದಕ್ಕಾಗಿಯೇ ನಾವು ಜತೆಯಲ್ಲಿದ್ದು ಚರ್ಚೆ ನಡೆಸುತ್ತಿದ್ದೇವೆ ಎಂದರು.

ಕೋಮು ದ್ವೇಷದ ಭಾಷಣ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಹಾಕುತ್ತಿರುವವರ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧೀರ್ ರೆಡ್ಡಿ, ಯಾರದ್ದೇ ಯಾವ ಮಾತೂ ಅಪರಾಧ ಕೃತ್ಯಗಳಿಗೆ ಪ್ರಚೋದನೆ ನೀಡುವಂತಿರಬಾರದು. ವಾಕ್ ಸ್ವಾತಂತ್ರೃ ಮತ್ತು ಅಪರಾಧ ಕೃತ್ಯಗಳಿಗೆ ಜನರನ್ನು ಪ್ರಚೋದಿಸುವ ಮಾತುಗಳ ನಡುವೆ ಸ್ಪಷ್ಟವಾದ ಅಂತರವಿದೆ. ಪ್ರಚೋದನೆ ನೀಡುವ ರೀತಿಯಲ್ಲಿ ಕಾನೂನಿಗೆ ವಿರುದ್ಧವಾಗಿ ಮಾತನಾಡಿದರೆ ಸಿಆರ್‌ಪಿಸಿ, ಐಪಿಸಿ ಕಾನೂನುಗಳಿವೆ. ಕಾನೂನಿನಲ್ಲಿ ಈ ಬಗ್ಗೆ ಕ್ರಮಕ್ಕೆ ಸಾಕಷ್ಟು ಅವಕಾಶಗಳಿದ್ದು, ಇಲಾಖೆ ಸೂಕ್ತ ಕ್ರಮ ವಹಿಸಲಿದೆ ಎಂದು ಸುಧೀರ್ ರೆಡ್ಡಿ ಹೇಳಿದರು.

ಯಾವುದೇ ಅಪರಾಧ ಕೃತ್ಯ ನಡೆದಾಗ ತನಿಖೆ ನಡೆಸುತ್ತೇವೆ. ಇಲ್ಲಿನ ಜನರು ಬುದ್ಧಿವಂತರು. ಅವರಿಗೆ ಕಾನೂನಿನ ಅರಿವಿದೆ. ನಮ್ಮ ಪೊಲೀಸ್ ಇಲಾಖೆಯೂ ಅದೇ ಕಾನೂನನ್ನು ಕಲಿತು, ಅದನ್ನು ಪಾಲಿಸುತ್ತದೆ. ಪ್ರತಿ ಅಪರಾಧಕ್ಕೂ ತಕ್ಕುದಾದ ಕಾನೂನು ಇದೆ. ಆ ಕಾನೂನಿಗೆ ಅನುಸಾರವಾಗಿ ಕ್ರಮ ಆಗುತ್ತದೆ ಎಂದು ಅವರು ಹೇಳಿದರು.

ಠಾಣೆಗಳಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ತಳ ಹಂತದ ಪೊಲೀಸ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯ ಅಗತ್ಯವಿರುವ ಬೇಡಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಧೀರ್ ರೆಡ್ಡಿ, ಎಲ್ಲಾ ಅಧಿಕಾರಿ ಸಿಬ್ಬಂದಿ ಉತ್ತಮವಾಗಿದ್ದಾರೆ. ಯಾರೇ ತಮ್ಮ ಕರ್ತವ್ಯದಲ್ಲಿ ವಿಫಲ ಆಗಿದ್ದಾರೆ ಎಂದರೆ ಅದರ ಜವಾಬ್ಧಾರಿಯನ್ನು ನಾನು ವಹಿಸುತ್ತೇನೆ. ನಮ್ಮ ಮಾರ್ಗದರ್ಶನವನ್ನು ಸರಿಯಾದ ನಿಟ್ಟಿನಲ್ಲಿ ಬಳಸಿಕೊಂಡು ಅವರು ಕಾರ್ಯ ನಿರ್ವಹಿಸಿದಾಗ ಯಾವುದೇ ತೊಂದರೆ ಆಗದು ಎಂದವರು ಹೇಳಿದರು.

ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗಳ ಜತೆ ಉಸ್ತುವಾರಿ ಸಚಿವರು ನಮ್ಮ ಜತೆ ಚರ್ಚಿಸಿದ್ದಾರೆ. ಸಲಹೆ ಸೂಚನೆ ನೀಡಿದ್ದಾರೆ ಎಂದವರು ಹೇಳಿದರು.

ಪೊಲೀಸ್ ಕಮಿಷನರ್ ನಡೆಸುತ್ತಿದ್ದ ಫೋನ್ ಇನ್ ಕಾರ್ಯಕ್ರಮ ಮತ್ತೆ ಪುನರಾರಂಭ ಆಗಲಿದೆಯೇ ಎಂಬ ಪ್ರಶ್ನೆಗೆ, ಯಾವುದೇ ದೂರನ್ನು ಸಾರ್ವಜನಿಕರು ನೇರವಾಗಿ ನಮಗೆ ತರಬಹುದು. ಮಾಧ್ಯಮದ ಮೂಲಕ ಬಂದ ದೂರನ್ನು ಪರಿಗಣಿಸಲಾಗುವುದು. ಯಾವುದೇ ಅಪರಾಧ ಪ್ರಕರಣಗಳು ನಡೆದಾಗಲೂ ಹಿಂದೆಯೂ ತನಿಖೆ ಆಗಿದೆ. ಮುಂದೆಯೂ ಆಗಲಿದೆ. ನಮ್ಮ ಕೆಲಸವೇ ಪೊಲೀಸಿಂಗ್ ಮಾಡುವಂತದ್ದು. ಅದನ್ನು ನಾವು ನಿಭಾಯಿಸುತ್ತೇವೆ ಎಂದು ಅವರು ಹೇಳಿದರು.

ಡಿಸಿಪಿ ಸಿದ್ದಾರ್ಥ್ ಗೋಯಲ್ ಉಪಸ್ಥಿತರಿದ್ದರು.