ಮಡಿಕೇರಿ: ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಕಾರ್ಯಕ್ರಮವು ಮಾ.೩ ರಂದು ನಡೆಯಲಿದ್ದು, ವಿವಿಧ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಸಿದ್ಧತೆ ಬಗ್ಗೆ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಲ್ಸ್ ಪೋಲಿಯೋ ಕಾರ್ಯಕ್ರಮ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಪಂಚಾಯತ್ ರಾಜ್, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರಾದೇಶಿಕ ಸಾರಿಗೆ ಇಲಾಖೆಗಳು ಅಗತ್ಯ ಸಹಕಾರ ನೀಡಬೇಕು. ಶಾಲೆಗಳು, ಬಸ್ ನಿಲ್ದಾಣಗಳಲ್ಲಿ ಹಾಗೂ ಜನ ದಟ್ಟಣೆ ಪ್ರದೇಶಗಳಲ್ಲಿ ೫ ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲು ಸಹಕಾರ ನೀಡಬೇಕು. ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಅಗತ್ಯ ವಾಹನ ನಿಯೋಜಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ ದಿನದಂದು ವಿದ್ಯುತ್ ಸಂಪರ್ಕವನ್ನು ನಿರಂತರವಾಗಿ ಕಲ್ಪಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ರೋಟರಿ, ಲಯನ್ಸ್, ರೆಡ್‌ಕ್ರಾಸ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆಯುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್ ಮಾತನಾಡಿ, ಪಲ್ಸ್ ಪೋಲಿಯೋ ಕಾರ್ಯಕ್ರಮ ಮಾ.೩ ರಂದು ಬೂತ್ ಮಟ್ಟದಲ್ಲಿ ನಡೆಯಲಿದೆ. ಮಾ.೪, ೫ ಮತ್ತು ೬ ರಂದು ಮೂರು ದಿನಗಳ ಕಾಲ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಹಾಗೂ ಮಾ.೪ ಮತ್ತು ೫ ರಂದು ಎರಡು ದಿನಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪಲ್ಸ್ ಪೋಲಿಯೋ ಹನಿ ಹಾಕುವ ದಿನಗಳಂದು ಪಂಚಾಯತ್ ರಾಜ್, ಶಿಕ್ಷಣ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪ್ರಾದೇಶಿಕ ಸಾರಿಗೆ ಇಲಾಖೆಗಳು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೋರಿದರು.
ಕೊಡಗು ಜಿಲ್ಲೆಯಲ್ಲಿ ೫ ವರ್ಷದೊಳಗಿನ ಒಟ್ಟು ೪೨,೩೭೫ ಮಕ್ಕಳಿದ್ದು, ೪,೪೦೦ ನಗರ ಪ್ರದೇಶದ ಮಕ್ಕಳು ಹಾಗೂ ೩೭,೯೭೫ ಗ್ರಾಮೀಣ ಪ್ರದೇಶದ ಮಕ್ಕಳು ಇದ್ದಾರೆ. ೫ ವರ್ಷದೊಳಗಿನ ವಲಸಿಗ ಮಕ್ಕಳು ಸೇರಿದಂತೆ ಪೋಲಿಯೋ ಹನಿ ಹಾಕಲಾಗುತ್ತದೆ ಎಂದು ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪೋಲಿಯೋ ಹನಿ ಹಾಕುವ ನಿಟ್ಟಿನಲ್ಲಿ ೪೬೪ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ೩೦ ಸಂಚಾರಿ ಬೂತ್‌ಗಳು, ೦೬ ಮೊಬೈಲ್ ತಂಡಗಳನ್ನು ನಿಯೋಜಿಸಲಾಗುತ್ತದೆ. ಜತೆಗೆ ೧೯೨೮ ಲಸಿಕಾದಾರರು, ೮೬ ಮೇಲ್ವಿಚಾರಕರು, ಹಾಗೆಯೇ ೯೨೪ ಸಿಬ್ಬಂದಿಗಳ ಮನೆ ಮನೆಗೆ ಭೇಟಿ ನೀಡುವ ತಂಡವನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ೮೦ ವಾಹನಗಳು ಅಗತ್ಯವಿದ್ದು, ವಾಹನ ನಿಯೋಜನೆಗೆ ಸಹಕರಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಯವರಲ್ಲಿ ಡಿಎಚ್‌ಒ ಕೋರಿದರು. ಪ್ರವಾಸಿ ಸ್ಥಳಗಳು, ಬಸ್ ನಿಲ್ದಾಣಗಳಲ್ಲಿ ಪೋಲಿಯೋ ಬೂತ್ ತೆರೆಯಲು ಅವಕಾಶ ಮಾಡಬೇಕು. ಕಾರ್ಮಿಕರ ಮಕ್ಕಳು, ಕೊಳಗೇರಿ ಪ್ರದೇಶದಲ್ಲಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕಲು ಸಹಕರಿಸುವಂತೆ ಮನವಿ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಗ್ರಾಮೀಣ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ, ಕಾರ್ಮಿಕ, ಪೊಲೀಸ್, ವೈದ್ಯಕೀಯ ಶಿಕ್ಷಣ, ಸೆಸ್ಕ್, ಕೆಎಸ್‌ಆರ್‌ಟಿಸಿ, ಪ್ರವಾಸೋದ್ಯಮ ಹೀಗೆ ಎಲ್ಲಾ ಇಲಾಖೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾಹಿತಿ ನೀಡಿ, ರೆಡ್‌ಕ್ರಾಸ್ ಸಂಸ್ಥೆಯಲ್ಲಿ ಒಂದು ವಾಹನವಿದ್ದು, ಒದಗಿಸಲಾಗುವುದು ಎಂದರು. ರೋಟರಿ ಮಿಸ್ಟಿಹಿಲ್ಸ್ ನಿರ್ದೇಶಕ ಡಾ.ಚೇತನ್, ರೋಟರಿ ಸಂಸ್ಥೆಯ ಅಚ್ಚಯ್ಯ, ರೋಟರಿಯನ್ ಮ್ರಾನಳಿನಿರವರು ಈ ಹಿಂದಿನಂತೆ ಪಲ್ಸ್ ಪೊಲಿಯೊ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.
ಸಭೆಯಲ್ಲಿ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪುರುಷೋತ್ತಮ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶ್ರೀನಿವಾಸ್, ತಾಲೂಕು ವೈದ್ಯಾಧಿಕಾರಿ ಡಾ.ಚೇತನ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪುಟ್ಟರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜು, ಪ್ರಾದೇಶಿಕ ಸಾರಿಗೆ ಕಚೇರಿಯ ಮೇಲ್ವಿಚಾರಕಿ ಸಲೀಮ, ಇತರರು ಇದ್ದರು.