ಜಿಲ್ಲೆ

ಸ್ವಚ್ಛತೆಗೆ ಪ.ಪಂ. ಜತೆ ಕೈ ಜೋಡಿಸಿ

ಪ್ರಸಿನ್ ಕೆ.ಆರ್

ಹನೂರು: ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ವಾಹನದಲ್ಲಿ ಹಾಕುವುದರ ಮೂಲಕ ಸ್ವಚ್ಛತೆಗೆ ಪಟ್ಟಣ ಪಂಚಾಯಿತಿಯೊಂದಿಗೆ ಕೈ ಜೋಡಿಸಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಕಸ ವಿಲೇವಾರಿ ನೂತನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಹನೂರು ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಆದರೆ, ಕಸವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ಸ್ವಚ್ಛತೆಯ ಕೊರತೆ ಕಾಡುತ್ತಿದೆ. ಇದರಿಂದ ವಾತಾವರಣದಲ್ಲಿ ಅನೈರ್ಮಲ್ಯ ಉಂಟಾಗುತ್ತಿದ್ದು, ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಮನೆಯಲ್ಲಿ ಸಂಗ್ರಹವಾದ ಕಸವನ್ನು ರಸ್ತೆ ಬದಿಯಲ್ಲಿ ಬಿಸಾಡದೆ ವಾರ್ಡ್‌ಗಳಿಗೆ ಆಗಮಿಸುವ ವಾಹನದಲ್ಲಿ ಹಾಕಬೇಕು. ಇದರಿಂದ ಸ್ವಚ್ಛತೆ ಕಾಪಾಡಲು ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ಅಧಿಕಾರಿಗಳು ಅಗತ್ಯ ಮೂಲ ಸೌಕರ್ಯ ಒದಗಿಸುವುದರ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಕಸವನ್ನು ಸಮರ್ಪಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವುದರ ಮೂಲಕ ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ಹೇಳಿದರು.

ಪ.ಪಂ.ಅಧ್ಯಕ್ಷೆ ಮಮ್ತಾಜ್‌ಬಾನು, ಉಪಾಧ್ಯಕ್ಷೆ ಆನಂದ್‌ಕುಮಾರ್, ಸದಸ್ಯ ಮಹೇಶ್, ಸುದೇಶ್, ಸೋಮಶೇಖರ್, ಬಸವರಾಜು, ಮುಖ್ಯಾಧಿಕಾರಿ ಅಶೋಕ್, ಇಂಜಿನಿಯರ್ ರಾಮಚಂದ್ರಸ್ವಾಮಿ, ಮಂಜೇಶ್, ರಾಜುಗೌಡ, ಕೃಷ್ಣಮೂರ್ತಿ, ಸಿದ್ದರಾಜು ಇತರರು ಇದ್ದರು.