ಮಳವಳ್ಳಿ: ರೈತರ ಹಿತಕ್ಕಾಗಿ ನಿರ್ವಹಿಸುತ್ತಿರುವ ಸೊಸೈಟಿಯನ್ನು ಎಲ್ಲ ಷೇರುದಾರರು ಉತ್ತಮ ವಹಿವಾಟು ಹಾಗೂ ಪಡೆದ ಸಾಲಗಳನ್ನು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಘದೊಂದಿಗೆ ಕೈಜೋಡಿಬೇಕಿದೆ ಎಂದು ಕ್ಯಾತನಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಜಗದೀಶ್ ತಿಳಿಸಿದರು.
ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸೊಸೈಟಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅನ್ನದಾತರ ಬದುಕಿಗೆ ಸ್ಥಳೀಯ ಸೊಸೈಟಿಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಸಾಲ ಸೌಲಭ್ಯಗಳನ್ನು ಸಕಾಲಕ್ಕೆ ಪೂರೈಸುವ ಸಂಘ ಮೂಲಕ ನೆರವಾಗುತ್ತಿವೆ. ಸಂಘದ ಆರ್ಥಿಕ ಸುಸ್ಥಿರತೆಯನ್ನು ರೈತರೇ ಕಾಯ್ದುಕೊಂಡು ಸದೃಢಗೊಳಿಸಬೇಕಾಗಿದ್ದು, ನಮ್ಮ ಸೊಸೈಟಿಯ ಅಭಿವೃದ್ಧಿಗೆ ಎಲ್ಲ ನಿರ್ದೇಶಕರು ಹಾಗೂ ಷೇರುದಾರ ಸದಸ್ಯರ ಸಹಕಾರ ಅತ್ಯಗತ್ಯವಾಗಿದೆ ಎಂದು ಮನವಿ ಮಾಡಿದರು.
ಸಂಘದ ಕರ್ಯ ನಿರ್ವಹಣಾಧಿಕಾರಿ ಪುಟ್ಟೇಗೌಡ ಸಂಘದ ವಾರ್ಷಿಕ ವರದಿಯನ್ನು ಸಭೆಗೆ ಮಂಡಿಸುವುದರ ಜತೆಗೆ ಪ್ರಸ್ತುತ ವಾರ್ಷಿಕ ವಹಿವಾಟಿನಲ್ಲಿ 9.58 ಲಕ್ಷ ರೂ. ಆದಯ ಗಳಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿರುವ ಸಂಘದ ಷೇರುದಾರ ಸದಸ್ಯರ ನಾಲ್ಕು ಮಕ್ಕಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಸೊಸೈಟಿ ಉಪಾಧ್ಯಕ್ಷ ನಾರಾಯಣ, ನಿರ್ದೇಶಕರಾದ ಶಿವಲಿಂಗಯ್ಯ, ರವಿಶಂಕರ್, ಮಹೇಶ್, ನಾಗೇಶ್, ಚಂದ್ರಶೇಖರ್, ಉಮೇಶ್, ಮರಿಸ್ವಾಮಿ, ಸುಜಾತಾ, ಲಕ್ಷ್ಮೀ, ಸಿಇಒ ಪುಟ್ಟೇಗೌಡ ಇದ್ದರು.