ಹುಣಸೂರು: ಗ್ರಾಮೀಣ ಭಾಗಗಳಲ್ಲಿ ಕೆರೆಕಟ್ಟೆಗಳನ್ನು ಉಳಿಸಿಕೊಂಡು ಅಭಿವೃದ್ಧಿಪಡಿಸುವ ಪುಣ್ಯ ಕಾರ್ಯದಲ್ಲಿ ರೈತರು ಪಾಲ್ಗೊಳ್ಳಬೇಕು ಎಂದು ಉಯಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್ ಮನವಿ ಮಾಡಿದರು.
ಗುರುವಾರ ಜಿಲ್ಲಾ ಪಂಚಾಯಿತಿ ಮೈಸೂರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಭಗೀರಥ ಸಂಸ್ಥೆಯ ಸಹಯೋಗದೊಂದಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕಲ್ಯಾಣಿ ಪುನಶ್ಚೇತನ ಕಾರ್ಯಕ್ರಮದಡಿ ತಾಲೂಕಿನ ಉಯಿಗೊಂಡನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕುಡಿಯುವ ನೀರು ಮುದ್ದನಹಳ್ಳಿ ಗ್ರಾಮದ ಪಟ್ಟಲದಮ್ಮನ ಕಲ್ಯಾಣಿಯನ್ನು ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರು ಅತ್ಯಮೂಲ್ಯ ವಸ್ತುವಾಗಿದ್ದು, ಕೆರೆಕಟ್ಟೆಗಳ ನಿರ್ವಹಣೆಯಿಂದ ಅಂತರ್ಜಲ ಹೆಚ್ಚಾಗುವ ಮೂಲಕ ರೈತರಿಗೆ ನೀರಿನ ಸಂಪನ್ಮೂಲ ಭರಪೂರವಾಗಿ ಸಿಗಲಿದೆ. ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಮತ್ತು ಜೀವನವನ್ನು ನೀಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರು, ರೈತರು ಹೆಚ್ಚಿನ ಕಾಳಜಿ ವಹಿಸಿ ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಅಯೂಬ್ ಪಾಷ, ಇಕ್ಬಾಲ್ ಪಾಷಾ, ರಾಧಾ, ಪಿಡಿಒ ತೇಜೇಂದ್ರ ವರಪ್ರಸಾದ್, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ತಂಡದ ಮಹೇಶ್, ತಾಲೂಕು ಸಂಯೋಜಕ ಆನಂದ್, ರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.