ಜಿಲ್ಲೆ

ನಶೆಮುಕ್ತ ಜಿಲ್ಲೆಯನ್ನಾಗಿಸಲು ಕೈಜೋಡಿಸಿ

ಪ್ರಸಿನ್ ಕೆ.ಆರ್

ಹಾಸನ: ಜಿಲ್ಲೆಯನ್ನು ನಶೆಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಲತಾ ಕುಮಾರಿ ಕರೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ನಾರ್ಕೋ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ತಮಗೆ ನೀಡಿರುವ ನಿಗದಿತ ಗುರಿ ಸಾಧಿಸಬೇಕು. ಯಾವುದೇ ವಿಷಯವನ್ನು ಉದಾಸೀನ ಮಾಡದೆ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ನಶೆಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಕ್ರಿಯಾ ಯೋಜನೆ ತಯಾರಾಗಬೇಕು. ಪ್ರತಿ ತಾಲೂಕು ಮಟ್ಟದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸುವಂತೆ ತಹಸೀಲ್ದಾರ್‌ಗಳಿಗೆ ಸೂಚಿಸಿದರಲ್ಲದೆ, ಉಪ ವಿಭಾಗಾಧಿಕಾರಿಗಳು ಮೇಲ್ವಿಚಾರಣೆ ಮಾಡುವಂತೆ ನಿರ್ದೇಶನ ನೀಡಿದರು.

ಗಾಂಜಾ ಬೆಳೆಯುತ್ತಿರುವ ಬಗ್ಗೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಯಾವುದಾದರೂ ದೂರುಗಳು ಕಂಡು ಬಂದಿದೆಯಾ ಎಂದು ತಹಸೀಲ್ದಾರ್‌ಗಳೂ ಕೂಡ ಗಮನಹರಿಸಬೇಕು. ಅಲ್ಲದೆ ದುರ್ಬಲ ಸ್ಥಳಗಳನ್ನು ಗುರುತಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಾರ್ಯೋನ್ಮುಖರಾಗಬೇಕು. ಜತೆಗೆ ಡಿ-ಅಡಿಕ್ಷನ್ ಸೆಂಟರ್ ತೆರೆಯಲು ಪರವಾನಗಿ ಪಡೆಯುವುದು ಕಡ್ಡಾಯ ಎಂದರು.

ಈ ಹಿಂದೆ ನಡೆದ ಸಭೆಯ ಅನುಪಾಲನಾ ವರದಿಯನ್ನು ಸಹಿಯೊಂದಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಜಿಲ್ಲಾ ಮಟ್ಟದ ನಾರ್ಕೋ ಸಮಿತಿಯನ್ನು ಮರು ರಚಿಸಿ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸುವಂತೆ ತಿಳಿಸಿದರು.

10 ತಂಡ ರಚಿಸುವುದರ ಜತೆಗೆ ಪಿಎಸ್‌ಐ, ತಾಲೂಕು ಆರೋಗ್ಯಾಧಿಕಾರಿ, ಫಾರ್ಮಸಿಸ್ಟ್, ತಂಡದಲ್ಲಿರಬೇಕು. ಪ್ರತಿ ಮಾಹೆ ಒಂದು ತಂಡ 10 ಔಷಧ ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಬೇಕು. ಹೋಂ ಸ್ಟೇ, ರೆಸಾರ್ಟ್‌ಗಳ ಸಂಖ್ಯೆ ಎಷ್ಟು ಇದೆಯೆಂದು ಪಟ್ಟಿ ಮಾಡಿ ಅವುಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರೈಲುಗಳ ಮೂಲಕ ಹೊರ ರಾಜ್ಯಗಳಿಂದ ಬರುವ ಗಾಂಜಾವನ್ನು ಪತ್ತೆ ಹಚ್ಚಿ ವಶಪಡಿಸಿಕೊಳ್ಳಲು ಕ್ರಮ ವಹಿಸುವಂತೆ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಗಾಂಜಾ ಸಾಗಣೆ ಪತ್ತೆಗಾಗಿ ನಾರ್ಕೋ ಡಾಗ್ ಸ್ಕ್ವಾಡ್ ಬಳಸಿಕೊಳ್ಳಲು ಸೂಚಿಸಿದರು.

ಸಕಲೇಶಪುರ, ಬೇಲೂರು ಹಾಗೂ ಆಲೂರಿನ ಕಾಫಿ ತೋಟಗಳಿಗೆ ಹೊರ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರ ಕುಟುಂಬಗಳ 18 ವರ್ಷದೊಳಗಿನ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಲು ಕ್ರಮವಹಿಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಮಕ್ಕಳನ್ನು ಕೆಲಸಕ್ಕೆ ಕರೆತರವುದನ್ನು ತಡೆಯಲು ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಬೇಕು. ಅಲ್ಲದೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆಹಚ್ಚಲು ಕ್ರಮ ವಹಿಸುವಂತೆ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಬಂದಿಖಾನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯೂ ವ್ಯಸನಿಗಳಿರುವುದು ಕಂಡು ಬಂದಿದೆ. ಬಂದಿಖಾನೆಯಿಂದ ಹೊರಬಂದ ನಂತರ ಜೀವನ ರೂಪಿಸಿಕೊಳ್ಳಲು ನೆರವಾಗುವಂತೆ ಎರಡು -ಮೂರು ತಿಂಗಳ ತರಬೇತಿ ನೀಡಿ ಸ್ವಯಂ ಉದ್ಯೋಗ ಕೈಗೊಂಡು ಜೀವನ ನಡೆಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ ಸಕಲೇಶಪುರ ಭಾಗದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ಆರೋಪವಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಬೇಕು. ಜಿಲ್ಲೆಯ ಎಲ್ಲ ಹಾಸ್ಟೆಲ್‌ಗಳಲ್ಲಿ ಮಕ್ಕಳ ಚಟುವಟಿಕೆಗಳ ಬಗ್ಗೆ ನಿಗಾವಹಿಸಲು ಸಭೆ ನಡೆಸಿ ವಾರ್ಡನ್‌ಗಳಿಗೆ ಸೂಚನೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯ ಸಿವಿಲ್ ನ್ಯಾಯಾಧಿಶೆ ದಾಕ್ಷಾಯಿಣಿ ಮಾತನಾಡಿ, ಔಷಧ ಅಂಗಡಿಗಳ ಪರಿಶೀಲನೆಗಾಗಿ ರಚಿಸಿರುವ ತಂಡದಲ್ಲಿ ಅರೆಕಾಲಿಕ ಸ್ವಯಂ ಸೇವಕರನ್ನು ಸೇರ್ಪಡೆ ಮಾಡುವಂತೆ ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಮ್ಮಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.