ಜಿಲ್ಲೆ

ಮೈಸೂರನ್ನು ಸ್ವಚ್ಛ ನಗರಿಯಾಗಿ ರೂಪಿಸಲು ಸಹಕರಿಸಿ : ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಮನವಿ

ಮೈಸೂರು: ಮೈಸೂರನ್ನು ಸ್ವಚ್ಛ ನಗರಿಯಾಗಿ ರೂಪಿಸಲು ಬೀದಿಬದಿ ವ್ಯಾಪಾರಿಗಳು ಸಹಕಾರ ನೀಡಬೇಕು ಎಂದು ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್ ಷರೀಫ್ ಮನವಿ ಮಾಡಿದರು.

ನಗರ ಪಾಲಿಕೆ, ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ಸಂಘ, ಪಟ್ಟಣ ವ್ಯಾಪಾರ ಸಮಿತಿ, ನೆಸ್ಲೆ ಇಂಡಿಯಾ ವತಿಯಿಂದ ನಗರದ ಜೆಎಲ್‌ಬಿ ರಸ್ತೆಯ ರೋಟರಿ ಭವನದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಬೀದಿಬದಿ ವ್ಯಾಪಾರಿಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವ್ಯಾಪಾರ ಮಾಡುವ ಜಾಗವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಫುಟ್‌ಪಾತ್ ಇರುವುದು ಜನರ ಸಂಚಾರಕ್ಕೆ. ಹಾಗಾಗಿ ವ್ಯಾಪಾರ ಸಂದರ್ಭ ಜನರ ಸಂಚಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಫುಟ್‌ಪಾತ್‌ನಲ್ಲಿ ಪಾತ್ರೆ ತೊಳೆಯುವುದು, ವ್ಯಾಪಾರ ಮುಗಿದ ನಂತರ ಆಹಾರವನ್ನು ಅಲ್ಲಿಯೇ ಚೆಲ್ಲಿ ಹೋಗುವುದು ಸರಿಯಲ್ಲ. ಇದರಿಂದ ನಗರವನ್ನು ಶುಚಿಯಾಗಿ ಇಡಲು ಸಾಧ್ಯವಿಲ್ಲ. ನಗರವನ್ನು ಶುಚಿಯಾಗಿ ಇಡಲು ನಿಮ್ಮ ಸಹಕಾರ ಅಗತ್ಯ ಎಂದರು.

1,500 ಬೀದಿಬದಿ ವ್ಯಾಪಾರಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಇನ್ನು ಮುಂದೆ ಹಂತ ಹಂತವಾಗಿ ಬೀದಿ ಬದಿ ವ್ಯಾಪಾರಿಗ ಳಿಗೆ ತರಬೇತಿ ನೀಡಲಾಗುವುದು. ಜನರಿಗೆ ಸುರಕ್ಷಿತ ಆಹಾರ ದೊರೆಯುವಂತೆ ಮಾಡುವುದು ಈ ತರಬೇತಿಯ ಉದ್ದೇಶವಾಗಿದೆ. ಜನರಿಗೆ ಶುದ್ಧವಾದ ಕುಡಿಯುವ ನೀರು ನೀಡಬೇಕು. ಪಾತ್ರೆಗಳನ್ನು ಶುಚಿಯಾಗಿ ತೊಳೆಯಬೇಕು. ಇಲ್ಲವಾದಲ್ಲಿ ಆಹಾರ ವಿಷಮಯವಾಗುವ ಸಾಧ್ಯತೆ ಹೆಚ್ಚು ಇದೆ ಎಂದು ಎಚ್ಚರಿಸಿದರು.

ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಭಾಸ್ಕರ್ ಶ್ರೀನಿವಾಸ್ ರಾಜೇ ಅರಸ್, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿ ರವೀಂದ್ರ, ನೆಸ್ಲೆ ಇಂಡಿಯಾ ಅಧಿಕಾರಿ ಕಮಲ್ ಹಾಗೂ ಇತರರು ಇದ್ದರು.