ಕಡೂರು: ಪ್ಲಾಸ್ಟಿಕ್‌ಮುಕ್ತ ಪಟ್ಟಣವನ್ನಾಗಿಸಲು ಅಂಗಡಿಗಳ ಮಾಲೀಕರು ಹಾಗೂ ಜನರ ಸಹಕಾರ ಅಗತ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ರುದ್ರೇಶ್ ತಿಳಿಸಿದರು.
ಪುರಸಭೆಯಲ್ಲಿ ಗುರುವಾದ ಸದಸ್ಯರು ಹಾಗೂ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಜುಲೈನಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಅಭಿಯಾನ ಆರಂಭಿಸಲಾಯಿತು. ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡು ಜಾಗೃತಿ ಮೂಡಿಸಲಾಗಿದೆ. ಹಲವೆಡೆ ಅಧಿಕಾರಿಗಳ ತಂಡದೊಂದಿಗೆ ದಂಡ ವಿಧಿಸಲಾಗಿದೆ. ಆದರೂ ಕೆಲವೆಡೆ ಪ್ಲಾಸ್ಟಿಕ್ ಚೀಲಗಳ ಮಾರಾಟ ಮಾಡಲಾಗುತ್ತಿದೆ. ಆದ್ದರಿಂದ ಪ್ರಮುಖವಾಗಿ ಪ್ಲಾಸ್ಟಿಕ್ ಚೀಲಗಳ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ಸಹಕಾರ ಮುಖ್ಯವಾಗಲಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಮಾರಾಟ ಮಾಡದಂತೆ ಪುರಸಭೆಯಿಂದ ಸಾಕಷ್ಟು ಬಾರಿ ತಿಳಿಸಿದರೂ ಅಂಗಡಿ ಮಾಲೀಕರು ನಿರ್ಲಕ್ಷಿೃಸುತ್ತಿದ್ದಾರೆ. ಕಸದ ವಿಲೇವಾರಿಯಲ್ಲಿಯೂ ಸಮಸ್ಯೆಗಳು ಕಾಡುತ್ತಿವೆ. ಪ್ಲಾಸ್ಟಿಕ್ ಉತ್ಪನ್ನದಿಂದ ಪರಿಸರ ಹಾಳಾಗುವುದನ್ನು ಎಲ್ಲರೂ ಅರಿತುಕೊಳ್ಳಬೇಕು. ಇನ್ನುಮುಂದೆ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಮಾರುವುವರ ವಿರುದ್ಧ ಪುರಸಭೆ ಅಧಿಕಾರಿಗಳು ತೆಗೆದುಕೊಳ್ಳುವ ಕ್ರಮಕ್ಕೆ ಸದಸ್ಯರು ಕೈಜೋಡಿಸುತ್ತಾರೆ ಎಂದು ತಿಳಿಸಿದರು. ಪುರಸಭಾ ಸದಸ್ಯರಾದ ತೋಟದಮನೆ ಮೋಹನ್‌ಕುಮಾರ್, ಮರಗುದ್ದಿಮನು, ಸುಧಾ ಉಮೇಶ್, ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಮಂಜಯ್ಯ, ಪ್ರೇಮ್‌ಕುಮಾರ್, ಜಗದೀಶ್, ತಿಮ್ಮಯ್ಯ ಇತರರಿದ್ದರು.