ಹೊಸಕೋಟೆ ತಾಲೂಕಿನ ಸೂಲಿಬೆಲೆ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಯಲ್ಲಿ ನಿರ್ಮಿಸಲಾದ ಮೇಲ್ಛಾವಣಿಯನ್ನು ಖಾಸಗಿ ಕಂಪನಿ ಸಿಎಂಒ ಸುಬ್ರತಾ ಕುಮಾರ್​ ಭದ್ರ ಉದ್ಘಾಟಿಸಿದರು. ಕಂಪನಿಯ ಮಂಜು, ರಾಬಿನ್​ ಮತ್ತು ಎಸ್​ಎನ್​ಎಫ್​ ಕಂಪನಿ ಮನು ಮತ್ತು ಜಿತಿನ್​, ಶಿಕ್ಷಕರು, ಪಾಲಕರು, ಶಾಲಾಭಿವೃದ್ಧಿ ಸಮಿತಿಯವರು ಇದ್ದರು. 
ಜಿಲ್ಲೆ

ಮಕ್ಕಳ ಶಿಕ್ಷಣದ ಕನಸು ನನಸಾಗಿಸಲು ಕೈ ಜೋಡಿಸಿ

ಸೂಲಿಬೆಲೆ : ಬಡ ಮಕ್ಕಳ ಉನ್ನತ ಶಿಕ್ಷಣದ ಕನಸು ನನಸಾಗಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು. ಸರ್ಕಾರಿ ಶಾಲೆಗಳಿಗೆ ಬೇಕಾಗಿರುವ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕಂಪನಿಗಳು ಮತ್ತು ದಾನಿಗಳು ಮುಂದಾಗಬೇಕು ಎಂದು ಖಾಸಗಿ ಕಂಪನಿ ಸಿಎಂಒ ಸುಬ್ರತಾ ಕುಮಾರ್​ ಭದ್ರ ಹೇಳಿದರು. ಸೂಲಿಬೆಲೆ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಯಲ್ಲಿ ಖಾಸಗಿ ಕಂಪನಿಯಿಂದ ಎರಡು ಶಾಲಾ ಕಟ್ಟಡಗಳ ಮಧ್ಯೆ ನಿರ್ಮಿಸಿರುವ ಮೇಲ್ಛಾವಣಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ತಮ್ಮ ಕನಸು ನನಸಾಗಿಸಲು ಶೈಕ್ಷಣಿಕವಾಗಿ ಸಿಗುವ ಸೌಲಭ್ಯಗಳನ್ನು ಸದ್ಬಳಸಿಕೊಂಡು ಗುರಿ ಮುಟ್ಟಲು ನಿರಂತರ ಪ್ರಯತ್ನ ಮಾಡಬೇಕು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ, ಸಮಾಜದ ಬದಲಾವಣೆ ಸಾಧ್ಯ. ಪಾಲಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಸಮಾಜಕ್ಕೆ ಸತರ್ಜೆಗಳನ್ನಾಗಿ ರೂಪಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದಾಗ ಉತ್ತಮ ನಾಗರಿಕರು ಸಮಾಜಕ್ಕೆ ಸಿಗಲು ಸಾಧ್ಯ ಎಂದರು.

ಕಂಪನಿಯ ಸಿಎಸ್​ಆರ್​ ಛೇರ್ಮನ್​ ವೈಭವ್​ ಕುಮಾರ್​ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ತಮ್ಮ ಕಂಪನಿಯ ಸಿಎಸ್​ಆರ್​ ಅನುದಾನದಡಿ ಶತಮಾನ ಕಂಡಿರುವ ಸೂಲಿಬೆಲೆ ಸರ್ಕಾರಿ ಕನ್ನಡ ಮತ್ತು ಆಂಗ್ಲ ಮಾದರಿ ಶಾಲೆಗೆ ಮೇಲ್ಛಾವಣಿ ನಿರ್ಮಿಸಿಕೊಟ್ಟಿದ್ದೇವೆ. ಎರಡು ಶಾಲೆಗಳ ನಡುವೆ ಮೇಲ್ಛಾವಣಿ ನಿರ್ಮಾಣದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಸಮಯ ವ್ಯರ್ಥ ಮಾಡದೆ ಮಕ್ಕಳು ಕಲಿಕೆಗೆ ಹೆಚ್ಚು ಒತ್ತು ನೀಡಬೇಕು. ಈ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿ ಕಾಣಬೇಕು ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕಿ ಸೌಮ್ಯಾ ಮಾತನಾಡಿ, ಮೇಲ್ಛಾವಣಿ ನಿರ್ಮಾಣದಿಂದಾಗಿ ಮಕ್ಕಳು ಬಿಸಿಯೂಟ ಸೇವನೆ, ಪ್ರಾರ್ಥನೆ, ಸಾಂಸತಿಕ ಚಟುವಟಿಕೆ ಸೇರಿ ಹಲವು ಕಾರ್ಯಗಳಿಗೆ ಅನುಕೂಲವಾಗಿದೆ ಎಂದರು. ಕಂಪನಿ ಅಧಿಕಾರಿಗಳನ್ನು ಶಾಲಾಭಿವೃದ್ಧಿ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಪಾಲಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲಾವರಣದಲ್ಲಿ ಪಾರ್ಕಿಂಗ್​

ಟೈಲ್ಸ್​ ಒದಗಿಸುವಂತೆ ಮನವಿ ಮಾಡಿದರು.