ಬಳ್ಳಾರಿ: ಜಿಲ್ಲೆಯನ್ನು ಕ್ಷಯಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಂಡೂರು ಶಾಸಕಿ ಈ.ಅನ್ನಪೂರ್ಣ ಹೇಳಿದರು.
ಇಲ್ಲಿನ ಬಿಮ್ಸ್ ನ ವೈದ್ಯಭವನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ವತಿಯಿಂದ ವಿಶ್ವ ಕ್ಷಯರೋಗ ದಿನಾಚರಣೆ-2025 ರ ಅಂಗವಾಗಿ ಹೌದು! ನಾವು ಕ್ಷಯವನ್ನು ಕೊನೆಗೊಳಿಸಬಹುದು’ ಎಂಬ ಧ್ಯೇಯವಾಕ್ಯದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ 2024 ನೇ ಸಾಲಿಗೆ ಎಸ್‌ಟಿಇಪಿ ಕಾರ್ಯಕ್ರಮದಡಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕ್ಷಯವು ಚಿಕ್ಕ ಮಕ್ಕಳಿನಿಂದ ಹಿರಿಯ ವಯಸ್ಸಿನವರಿಗೂ ಬಾಧಿಸುವಂತಹ ರೋಗವಾಗಿದೆ. ಹೆಚ್ಚಾಗಿ ಧೂಳಿನಿಂದ ಕೂಡಿದ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಸಹ ಬರಬಹುದಾಗಿದೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಜನತೆಯು ಕ್ಷಯರೋಗದ ಕುರಿತು ಹೆಚ್ಚು ಕಾಳಜಿ ತೆಗೆದುಕೊಳ್ಳದೇ ಇರುವುದು ಕಂಡುಬರುತ್ತಿದ್ದು, ಈ ದಿಶೆಯಲ್ಲಿ ಸೂಕ್ತ ಜಾಗೃತಿ ನೀಡಬೇಕು. ಜತೆಗೆ ಕ್ಷಯರೋಗವನ್ನು ಸಕಾಲದಲ್ಲಿ ಗುರುತಿಸುವ ಕಾರ್ಯದಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಆಶಾಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ಕ್ಷಯಮುಕ್ತ ಬಳ್ಳಾರಿಯನ್ನಾಗಿ ಮಾಡುವ ಪ್ರಯತ್ನವನ್ನು ನಾವೆಲ್ಲರೂ ಸೇರಿ ಮಾಡೋಣ ಎಂದು ಕರೆ ನೀಡಿದರು.
ಜಿಪಂ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೇರ್ ಮಾತನಾಡಿ, ಜಿಲ್ಲೆಯಲ್ಲಿ ಕ್ಷಯ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿವೆ. ಸಂಪೂರ್ಣವಾಗಿ ಕಡಿಮೆ ಮಾಡಲು ಸಾರ್ವಜನಿಕರು ಆರೋಗ್ಯ ಇಲಾಖೆಗೆ ಕೈಜೋಡಿಸಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ವಿ.ಇಂದ್ರಾಣಿ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಕ್ಷಯವನ್ನು ತ್ವರಿತವಾಗಿ ಪತ್ತೆಹಚ್ಚಲು ಸಿಬಿನ್ಯಾಟ್ ಯಂತ್ರಗಳನ್ನು ಬಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಟ್ರುನ್ಯಾಟ್ ಮಿಷನ್ ಗಳನ್ನು ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನ ಮಾಡಲಾಗಿದ್ದು, ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಿದ್ದು, ಚಿಕಿತ್ಸೆ ಪೂರ್ಣಗೊಂಡು ಗುಣಮುಖರಾಗುವ ಪ್ರಮಾಣ ಶೇ.85% ರಷ್ಟಿದ್ದು ರಾಜ್ಯಮಟ್ಟದಲ್ಲಿ ಗಣನೀಯ ಸಾಧನೆ ಮಾಡಿದ ಜಿಲ್ಲೆಗಳಲ್ಲಿ ಜಿಲ್ಲೆಯು ಒಂದಾಗಿದೆ ಎಂದು ತಿಳಿಸಿದರು.
ಕ್ಷಯಮುಕ್ತ ಗ್ರಾಪಂ: ತಾಲೂಕಿನ ಭೈರದೇವನಹಳ್ಳಿ, ಯರ‌್ರಗುಡಿ, ಸಂಗನಕಲ್ಲು, ಸಿರಿವಾರ ಮತ್ತು ಕೊರ‌್ಲಗುಂದಿ ಗ್ರಾಮಗಳಿಗೆ ಕ್ಷಯ ಮುಕ್ತ ಪ್ರಶಸ್ತಿ ನೀಡಲಾಯಿತು. ಬಳಿಕ ಉತ್ತಮ ಸೇವೆ ಸಲ್ಲಿಸಿದ ವೈದ್ಯರು, ಕ್ಷೇತ್ರ ಸಿಬ್ಬಂದಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸಂಘ ಸಂಸ್ಥೆಗಳಿಗೆ ಸನ್ಮಾನಿಸಲಾಯಿತು. ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಜನಜಾಗೃತಿ ಜಾಥಾವು ಗಮನ ಸೆಳೆಯಿತು. ವಿವಿಧ ಸಾಂಸ್ಕೃತಿ ಕಲಾತಂಡಗಳನ್ನೊಳಗೊಂಡ ಜಾಥಾದಲ್ಲಿ ಆಶಾ-ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿ ಘೋಷಣೆ ಕೂಗುವ ಮೂಲಕ ಜಾಗೃತಿ ಮೂಡಿಸಲಾಯಿತು. ಕ್ಷಯರೋಗ ಜಾಗೃತಿ ಮೂಡಿಸುವ ಮಾಹಿತಿ ಫಲಕಗಳು ರಾರಾಜಿಸಿದವು.