ರಟ್ಟಿಹಳ್ಳಿ: ಪಟ್ಟಣದ ಪ್ರತಿಯೊಂದು ಮನೆ ಮತ್ತು ಅಂಗಡಿಗಳಿಂದ ತಾಜ್ಯ ಹಾಗೂ ಕಸವನ್ನು ವಾಹನಗಳ ಮೂಲಕ ಸಂಗ್ರಹಿಸಿ, ವಿಲೇವಾರಿ ಮಾಡಲಾಗುತ್ತದೆ. ಈ ವಾಹನಗಳಿಗೆ ಮನೆಗಳ ಮಾಲೀಕರು ಮತ್ತು ವ್ಯಾಪರಸ್ಥರು ಸಹಕಾರ ನೀಡಿ ಪಟ್ಟಣದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಲು ಕೈಜೋಡಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿಯ ನೂತನ ಕಸ ವಿಲೇವಾರಿ ಆಟೋ ಟಿಪ್ಪರ್ ವಾಹನಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿ, ಕಸವನ್ನು ರಸ್ತೆ ಬದಿಯಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಕದೇ ವಾಹನಗಳಿಗೆ ಹಾಕಬೇಕು ಎಂದರು.
ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ 18 ಲಕ್ಷ ರೂಪಾಯಿ ವೆಚ್ಚದಲ್ಲಿ 3 ಆಟೋ ಟಿಪ್ಪರ್ಗಳನ್ನು ಖರೀದಿಸಿ, ಕಸ ವಿಲೇವಾರಿಗೆ ಬಳಸಲಾಗುತ್ತಿದೆ ಎಂದರು.
ಆಡಳಿತಾಧಿಕಾರಿ ತಹಸೀಲ್ದಾರ್ ಕೆ. ಗುರುಬಸವರಾಜ, ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಪಪಂ ಸಿಬ್ಬಂದಿ ರಾಜಕುಮಾರ ಹೇಂದ್ರೆ, ಪರಮೇಶಪ್ಪ ಅಂತರವಳ್ಳಿ, ಸಂತೋಷ ಬಿಳಚಿ, ಮಂಜಪ್ಪ ಸುಣಗಾರ, ಬಸವರಾಜ ಕವಲತ್ತು, ಪಿ.ಆರ್. ಮಲ್ಲನಗೌಡ್ರ, ಮಂಜಪ್ಪ ಚಲವಾದಿ, ಅನುರಾಧ ಸುಣಗಾರ, ಅನುಪಮ ಸೂರ್ಯವಂಶಿ, ನಿಖಿಳ್ ಅರ್ಕಾಚಾರಿ, ವೀರೇಶ ದ್ಯಾವಕ್ಕಳವರ, ಬಸವರಾಜ ಕಟ್ಟೇಕಾರ, ಬಸವರಾಜ ಹಿರೇಮಠ ಮತ್ತು ಪೌರ ಕಾಮಿರ್ಕರು ಉಪಸ್ಥಿತರಿದ್ದರು.