ವಿಜಯಪುರ: ವ್ಯಸನ ಮುಕ್ತ ಹಾಗೂ ಆರೋಗ್ಯಯುತ ಸುಂದರ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಈ ಕಾರ್ಯಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಹೇಳಿದರು.
ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರೋಗ್ಯವೂ ಒಳಗೊಂಡಂತೆ ಸಮಾಜದ ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ತರಹದ ವ್ಯಸನಕ್ಕೆ ಒಳಗಾಗದೇ, ಉತ್ತಮ ಹವ್ಯಾಸ ರೂಢಿಸಿಕೊಂಡು, ಸದೃಢ ಸಮಾಜ ನಿರ್ಮಾಣ ಮಾಡಿ ಅದನ್ನು ಗಟ್ಟಿಗೊಳಿಸುವ ಬಹು ದೊಡ್ಡ ಹೊಣೆಗಾರಿಕೆ ನಮ್ಮದಾಗಿದೆ. ಅದನ್ನು ಅರಿತು ಮಾದಕ ವಸ್ತುಗಳ ಸೇವನೆಯಂತಹ ದುರ್ವ್ಯಸನ ಹಾಗೂ ದುಶ್ಚಟಗಳಿಂದ ದೂರವಿದ್ದು, ಬದುಕು ಹಸನಗೊಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಉಪನ್ಯಾಸ ನೀಡುತ್ತಾ, ಮೊಬೈಲ್ ಕೂಡ ಒಂದು ವ್ಯಸನ. ಅದನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಕೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ವ್ಯಾಸಂಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಸಕ್ತಿವಹಿಸಿ ಅಧ್ಯಯನ ಮಾಡುವ ಮೂಲಕ ಬಾಳು ಸುಂದರ ಗೊಳಿಸಿಕೊಳ್ಳಬೇಕು. ಡಾ.ಮಹಾಂತ ಶಿವಯೋಗಿಗಳು ಈ ದಿಸೆಯಲ್ಲಿ ವ್ಯಸನಮುಕ್ತ ಸಮಾಜ ಕನಸು ಹೊಂದಿ ಆ ದಿಸೆಯಲ್ಲಿ ನಿರಂತರ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು.
ಮಹಾಂತ ಶಿವಯೋಗಿಗಳು ಜನರಲ್ಲಿನ ವ್ಯಸನಗಳನ್ನು ತಮ್ಮ ಜೋಳಿಗೆಗೆ ಭಿಕ್ಷೆ ರೂಪದಲ್ಲಿ ಪಡೆದು, ಸನ್ಮಾರ್ಗದ ಪಥ ತೋರಿದವರಾಗಿದ್ದು, ಅವರ ಜೀವನಾದರ್ಶ ಅವರ ತತ್ವ ವಿಚಾರಗಳು ಅಳವಡಿಸಿಕೊಳ್ಳುವ ಮೂಲಕ ಈ ಕಾರ್ಯಕ್ರಮದ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳನ್ನು ತ್ಯಜಿಸಬೇಕು ಎಂದರು.
ಮಾನಸಿಕ ಆರೋಗ್ಯ ಜಿಲ್ಲಾ ಘಟಕದ ಮನೋರೋಗ ತಜ್ಞ ಡಾ.ಮಂಜುನಾಥ ಮಸಳಿ ಮಾತನಾಡಿ, ಕೆಲಸದ ಒತ್ತದ, ಸಹವಾಸ ದೋಷ, ಫ್ಯಾಷನ್, ಸಂಬಂಧಗಳಲ್ಲಿನ ಬಿರುಕು, ಕೌಟುಂಬಿಕ ಸಮಸ್ಯೆ, ಆರ್ಥಿಕ ಸಮಸ್ಯೆಗಳು ವ್ಯಸನಕ್ಕೆ ಅಂಟಿಕೊಳ್ಳುವ ಮಾರ್ಗಗಳಾಗಬಾರದು. ದುಶ್ಚಟಗಳ ಕಡೆಗಣಿಸಿ ಅವುಗಳಿಂದ ಹೊರಬರಲು ಪ್ರತಿಯೊಬ್ಬರು ಉತ್ತಮ ಹವ್ಯಾಸ ಹಾಗೂ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಜಿಲ್ಲಾ ಶಸ್ತಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಜಿಲ್ಲಾ ಎನ್‌ಐಸಿ ಅಧಿಕಾರಿ ಶಿವಾನಂದ ಗೂಗವಾಡ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಆರೋಗ್ಯ ಇಲಾಖೆಯ ಅಧಿಕಾರಿ ಜಿ.ಎಂ. ಕೊಲೂರು, ರೇಖಾ ದಶವಂತ, ಸುರೇಶ ಅಂಬಿಗೇರ, ಮಂಜುಳಾ ದುರ್ಗನವರ, ವೈಷ್ಣವಿ, ವಿದ್ಯಾಶ್ರೀ ಹೊಸಮನಿ, ಪ್ರಕಾಶ ಘಟಕಾಂಬಳೆ, ನಾಗೇಶ ಸಾಗರ ಮತ್ತಿತರರಿದ್ದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ವ್ಯಸನ ಮುಕ್ತ ಕುರಿತ ಪ್ರಮಾಣ ವಚನ ಬೋಧಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ವಂದಿಸಿದರು. ಸಂಗೀತಾ ಮಠಪತಿ ನಿರೂಪಿಸಿದರು. ಖ್ಯಾತ ಗಾಯಕ ವಿರೇಶ ಹಾಗೂ ಅವರ ತಂಡ ಕಾರ್ಯಕ್ರಮಕ್ಕೆ ಮೊದಲು ಪ್ರಸ್ತುತಪಡಿಸಿದ ಗಾಯನ ಪ್ರೇಕ್ಷಕರ ಮನಮುಟ್ಟಿತು.