ಜಿಲ್ಲೆ

ಸ್ವಚ್ಛ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

 ವೃತ್ತ ನಿರೀಕ್ಷಕ ಸತ್ಯನಾರಾಯಣ್ ಸಲಹೆ

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು

ಮಾದಕ ವಸ್ತು ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ. ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ ಎಂದು ವೃತ್ತ ನಿರೀಕ್ಷಕ ಕೆ.ಪಿ. ಸತ್ಯನಾರಾಯಣ್ ಹೇಳಿದರು.

ನಗರದ ತಾಲೂಕು ಪೊಲೀಸ್ ಇಲಾಖೆ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿ, ಮಾದಕ ವಸ್ತು ಸೇವನೆ ಪ್ರಾರಂಭದಲ್ಲಿ ಉಲ್ಲಾಸ ನೀಡುತ್ತದೆ. ಬಳಿಕ ಚಟವಾಗಿ ಕಾಡುತ್ತದೆ. ಸಮಾಜದಲ್ಲಿ ಹೆಸರು ಹಾಳು ಮಾಡಲಿದೆ. ಮಾದಕ ವಸ್ತುಗಳನ್ನು ಅಪ್ರಾಪ್ತರಿಗೆ ನೀಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಸೇವಿಸುವುದು ಅಪರಾಧ. ಸ್ವಚ್ಛ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ಪಿಎಸ್‌ಐ ಗೋಪಾಲ್ ಮಾತನಾಡಿ, ಹಿರಿಯರನ್ನು ಮಕ್ಕಳು ಅನುಸರಿಸುತ್ತಾರೆ. ಪಾಲಕರು ದುಶ್ಚಟಗಳಿಂದ ದೂರವಿದ್ದು, ಮಕ್ಕಳನ್ನು ಉತ್ತಮವಾಗಿ ಬೆಳೆಸಬೇಕು. ಮಾದಕ ವಸ್ತುಗಳ ಅಕ್ರಮ ಸಾಗಾಟ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ಬಿತ್ತಿ ಪತ್ರಗಳೊಂದಿಗೆ ಜಾಗೃತಿ ಜಾಥಾ ನಡೆಸಿ, ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಗ್ರಾಮಾಂತರ ಠಾಣಾ ಪಿಎಸ್‌ಐ ರಮೇಶ್ ಗುಗ್ಗರಿ, ಚಂದ್ರಕಲಾ, ಲಲಿತಮ್ಮ, ಪೊಲೀಸ್ ಸಿಬ್ಬಂದಿ, ಶಾಲಾ ಉಪಾಧ್ಯಾಯರು ಹಾಜರಿದ್ದರು.