ಜಿಲ್ಲೆ

ಸೂರ್ಯ ನಾರಾಯಣ ಟ್ರಸ್ಟ್‌ನ ಬೆಳವಣಿಗೆಗೆ ಕೈ ಜೋಡಿಸಿ

ತರೀಕೆರೆ: ನಂಬಿಕೆ, ವಿಶ್ವಾಸಾರ್ಹತೆಗೆ ಹೆಸರಾದ ಶ್ವಾನದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ ಕಾಳಜಿವಹಿಸುವ ಕಾರ್ಯ ಅದ್ಭುತ ಎಂದು ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಹೇಳಿದರು.
ಲಕ್ಕೇನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಪೊಲೀಸ್ ಶ್ವಾನದಳದಲ್ಲಿ ಮಾದಕ ವಸ್ತು ಪತ್ತೆ ಹಚ್ಚುವುದರಲ್ಲಿ ಪ್ರಸಿದ್ದಿಯಾಗಿದ್ದ ಮೃತಪಟ್ಟಿರುವ ಶ್ವಾನದ ಹೆಸರಿನಲ್ಲಿ ಸಮಾನ ಮನಸ್ಕರು ಸ್ಥಾಪಿಸಿರುವ ಸೂರ್ಯ ನಾರಾಯಣ ಸಾಮಾಜಿಕ ಸೇವಾ ಸಮಿತಿ ಉದ್ಘಾಟಿಸಿ ಮಾತನಾಡಿದ ಅವರು, ಬಡತನದ ನಡುವೆಯೂ ಬೇರೆಯವರ ಬಗ್ಗೆಗಿನ ಕಳಕಳಿ ಇತರರಿಗೆ ಸ್ಪೂರ್ತಿಯಾಗುವಂಥದ್ದು. ಸದುದ್ದೇಶದಿಂದ ಸ್ಥಾಪನೆಯಾದ ಟ್ರಸ್ಟ್‌ನ ಬೆಳವಣಿಗೆಗೆ ಸದಸ್ಯರು ಮಾತ್ರವಲ್ಲ, ಸಹೃದಯಿಗಳೂ ಕೈ ಜೋಡಿಸುವ ಅನಿವಾರ್ಯತೆ ಇದೆ ಎಂದರು.
ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ಮಾತನಾಡಿ, ಇಂದಿನ ಸ್ವಾರ್ಥ ಜಗತ್ತಿನಲ್ಲಿ ನಂಬಿಕೆಗೆ ಅರ್ಹರಾಗಿ ಬದುಕುವುದು ಅತ್ಯಗತ್ಯ. ಈ ದಿಸೆಯಲ್ಲಿ ಹೊಸ ಹಜ್ಜೆ ಇಟ್ಟಿರುವ ಸೂರ್ಯ ನಾರಾಯಣ ಸಾಮಾಜಿಕ ಸೇವಾ ಸಮಿತಿ ಶಿಕ್ಷಣದಿಂದ ವಂಚಿತವಾದ ಮಕ್ಕಳು, ಅಶಕ್ತರ ನೆರವಿಗೆ ನಿಲ್ಲಬೇಕು ಎಂದು ಆಶಿಸಿದರು.
ಕನಕ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಬಸವರಾಜ್ ಮಾತನಾಡಿ, ಕಷ್ಟದ ಜೀವನ ಕಂಡವರಿಂದಲೇ ಇಂಥ ಸೇವಾ ಕಾರ್ಯಕೈಗೊಳ್ಳಲು ಸಾಧ್ಯ. ದೂರಗಾಮಿ ಚಿಂತನೆಯುಳ್ಳವರಿಂದ ಸ್ಥಾಪನೆಯಾದ ಸೂರ್ಯ ನಾರಾಯಣ ಸಾಮಾಜಿಕ ಸೇವಾ ಸಮಿತಿ ಉತ್ತಮ ಕಾರ್ಯಗಳ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಲಿ ಎಂದರು.
ಸಮಿತಿ ಅಧ್ಯಕ್ಷೆ ಕೆ.ಟಿ.ಕವಿತಾ ಮಾತನಾಡಿ, 2017-18ನೇ ಸಾಲಿನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರಿಂದ 3 ಲಕ್ಷ ರೂ. ನಗದು ಬಹುಮಾನ ಪಡೆದು ಪ್ರಶಂಸೆಗಳಿಸಿದ್ದ ಶ್ವಾನದ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿರುವುದು ಶ್ಲಾಘನೀಯ. ಮುಂದೆ ಟ್ರಸ್ಟ್ ಸುತ್ತಮುತ್ತಲ ಗ್ರಾಮಗಳ ಸಮಸ್ಯೆಗೆ ಸ್ಪಂದನೆ ನೀಡಲಾಗುವುದು ಎಂದರು.
ಸೂರ್ಯ ನಾರಾಯಣ ಸಾಮಾಜಿಕ ಸೇವಾ ಸಮಿತಿಯಿಂದ ಪಿರಮೇನಹಳ್ಳಿ, ಬೇಲೇನಹಳ್ಳಿ, ಲಕ್ಷ್ಮೀಸಾಗರ, ಎ.ರಾಮನಹಳ್ಳಿ, ಲಕ್ಕೇನಹಳ್ಳಿ ಶಾಲೆ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಬೇಕಾದ ಕಲಿಕಾ ಪರಿಕರ ಮತ್ತು ಪದವಿ ತರಗತಿ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ಸಹಾಯ ಧನ ವಿತರಿಸಲಾಯಿತು 9 ಸರ್ಕಾರಿ ಶಾಲೆಗಳ ಗ್ರಂಥಾಲಯಕ್ಕೆ ಅಗತ್ಯ ಪುಸ್ತಕ, 5 ಶಾಲೆಗಳಿಗೆ ವಿವಿಧ ಜಾತಿಯ ಸಸಿ ವಿತರಣೆ, ಹಿಂದುಳಿದ 4 ಮಕ್ಕಳನ್ನು ಒಂದು ವರ್ಷದ ಮಟ್ಟಿಗೆ ದತ್ತು ಪಡೆದರು.
ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಶಾಸಕ ಜಿ.ಎಚ್.ಶ್ರೀನಿವಾಸ್ ಪುತ್ರಿ ರಚನಾ, ಗೌರವಾಧ್ಯಕ್ಷ ಬಿ.ಎಸ್.ಭಗವಾನ್, ಶಿಕ್ಷಕರಾದ ಎಚ್.ಟಿ.ತಿಪ್ಪೇಶಪ್ಪ, ಸೂರ್ಯನಾರಾಯಣ ಶರ್ಮ, ನಾಗರಾಜಪ್ಪ, ಮಂಜೇಶ್, ನಿವೃತ್ತ ಶಿಕ್ಷಕ ವಿಶ್ವನಾಥ್, ಗ್ರಾಪಂ ಉಪಾಧ್ಯಕ್ಷೆ ಡಿ.ಸಿ.ಶ್ರುತಿ, ನಿವೃತ್ತ ಯೋಧ ಮಿಲ್ಟ್ರಿ ಶ್ರೀನಿವಾಸ್, ಗ್ರಾಮಸ್ಥರಾದ ಎಸ್.ವಿ.ಶ್ರೀನಿವಾಸ್, ತಿಪ್ಪೇಶಪ್ಪ, ಆರ್.ಮಂಜುನಾಥ್, ಮುಕುಂದ, ರಾಹುಲ್‌ನಾಯ್ಕ, ರೇಣಕಮ್ಮ, ರಾಜಪ್ಪ, ಶಶಾಂಕ್, ಅಜ್ಜಯ್ಯ, ಶಾಂತಪ್ಪ ಮತ್ತಿತರರಿದ್ದರು.