ಹರೀಶ್ ಮೋಟುಕಾನ ಮಂಗಳೂರು
ವಾಯುವಿಹಾರ, ವ್ಯಾಯಾಮ, ವಾಕಿಂಗ್ ಮಾಡುವವರ ತಾಣವಾಗಿ ಗುರುತಿಸಿಕೊಂಡು ಪ್ರತಿದಿನ ನೂರಾರು ಜನ ಭೇಟಿ ನೀಡುವ ಮೇರಿಹಿಲ್ ಹೆಲಿಪ್ಯಾಡ್‌ನ ಜಾಗರ್ಸ್ ಪಾರ್ಕ್ ಪ್ರಸಕ್ತ ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತಿದೆ.
ಹುಣಸೆ, ನೇರಳೆ, ನೆಲ್ಲಿ, ಕಹಿಬೇವು ಮೊದಲಾದ ಮರಗಳು ಮೈದಾನದ ಸುತ್ತಲೂ ಬೆಳೆದಿವೆ. ಪರಿಸರ ಪ್ರೇಮಿ, ಸಹಾಯಕ ಪೊಲೀಸ್ ನಿರೀಕ್ಷಕ ಹರೀಶ್ ಪದವಿನಂಗಡಿ ಮೊದಲಾದವರು ಮರಗಳ ಸುತ್ತ ಸಿಮೆಂಟ್ ಕಟ್ಟೆ ಕಟ್ಟಿಸಿದ್ದಾರೆ. ಮರಗಳ ಬುಡದಲ್ಲಿ ತುಳಸಿ ಗಿಡ ನೆಟ್ಟು ವ್ಯಾಯಾಮ, ಧ್ಯಾನ ಮಾಡುವವರಿಗೆ ಪೂರಕ ವಾತಾವರಣ ಕಲ್ಪಿಸಿದ್ದಾರೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಿರುವ ಈ ಪ್ರದೇಶದಲ್ಲಿ ಗಿಡಗಳ ಬೆಳವಣಿಗೆಗೆ ವ್ಯಾಯಾಮಕ್ಕೆಂದು ಬರುವವರು ಕ್ಯಾನ್‌ಗಳಲ್ಲಿ ನೀರು ತಂದು ಗಿಡಗಳಿಗೆ ಹಾಕಿ ಪೋಷಿಸುತ್ತಿದ್ದಾರೆ. ಈ ಶ್ರಮದ ಫಲದಿಂದ ಹಲವು ಮರಗಳು ಇಲ್ಲಿ ಬೆಳೆದು ನಿಂತಿವೆ. ಉತ್ತಮ ಗಾಳಿ ಬೀಸುವ ಪ್ರದೇಶವಾಗಿರುವುದರಿಂದ ಬೆಳಗ್ಗಿನಿಂದ ರಾತ್ರಿ ತನಕ ನೂರಾರು ಜನ ಆಟವಾಡಲು, ಪ್ರಕೃತಿ ಸೌಂದರ್ಯ ಸವಿಯಲು ಬಂದು ಹೋಗುತ್ತಾರೆ.
ವಾಹನ ಪ್ರವೇಶಕ್ಕೆ ತಡೆ
ಮೈದಾನದೊಳಗೆ ವ್ಯಾಯಾಮ ಮಾಡುವ ಸ್ಥಳಕ್ಕೆ ವಾಹನ ಚಾಲನೆ ನಿಷೇಧ. ವಾಹನ ಚಾಲನೆ ಕಲಿಕೆಗೂ ಅವಕಾಶವಿಲ್ಲ. ಈ ಬಗ್ಗೆ ನಾಮಫಲಕ ಅಳವಡಿಸಿದ್ದರೂ ಹಲವು ಮಂದಿ ವೇಗದ ವಾಹನ ಚಲಾವಣೆ, ವೀಲಿಂಗ್ ಮಾಡುತ್ತಿದ್ದರು. ಅವರಿಗೆ ತಿಳಿ ಹೇಳಿದರೂ ಕೆಲವರು ಉಡಾಫೆಯಿಂದ ವರ್ತಿಸುತ್ತಿದ್ದರು. ಇದನ್ನು ತಡೆಗಟ್ಟಲು ಮೈದಾನದ ಸುತ್ತ ವಾಹನಗಳು ಪ್ರವೇಶಿಸದಂತೆ ಜೆಸಿಬಿ ಮೂಲಕ ಉದ್ದವಾಗಿ ಹೊಂಡ ತೋಡಲಾಗಿದೆ. ಈಗ ನಿರಾತಂಕವಾಗಿ ವ್ಯಾಯಾಮ ಮಾಡಬಹುದು.
ಕಸದ ಬುಟ್ಟಿ ಜೋಡಣೆ
ರಾತ್ರಿ ವೇಳೆ ಕೆಲವರು ಮೈದಾನಕ್ಕೆ ಆಗಮಿಸಿ ಮದ್ಯಪಾನ ಮಾಡಿ, ಆಹಾರ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಕುತ್ತಿದ್ದರು. ಇದನ್ನು ತಡೆಯಲು ಮೈದಾನದ ಸುತ್ತಲೂ ಕಸದ ಬುಟ್ಟಿಗಳನ್ನು ಇಡಲಾಗಿದೆ. ವಿಹಾರಕ್ಕೆ ಬಂದವರು ತ್ಯಾಜ್ಯಗಳನ್ನು ಕಸದ ಬುಟ್ಟಿಗೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಮೈದಾನದೊಳಗೆ ಮದ್ಯ ಸೇವನೆ ತಡೆಯಲು ಕಾವೂರು ಪೊಲೀಸರು ಗಸ್ತು ಬರುವ ಮೂಲಕ ನಿಗಾ ಇಟ್ಟಿದ್ದಾರೆ. ಗಸ್ತು ವಾಹನ ರಾತ್ರಿ ವೇಳೆ ಒಂದಷ್ಟು ಹೊತ್ತು ನಿಲ್ಲುತ್ತಿದೆ.
ಪುಷ್ಪಾ ಪ್ರಸಾದ್ ಸ್ಮರಣಾರ್ಥ ಕಟ್ಟೆ
2008ರ ಮೇ 13ರಿಂದ ಡಿಸೆಂಬರ್ 25ರ ತನಕ ಎ.ಎಂ.ಪ್ರಸಾದ್ ಪಶ್ಚಿಮ ವಲಯ ಐಜಿಪಿಯಾಗಿದ್ದರು. ಅವರ ತಾಯಿ ಪುಷ್ಪಾ ಪ್ರಸಾದ್ ಸಾಯಂಕಾಲ ಹೆಲಿಪ್ಯಾಡ್‌ನ ಮೈದಾನಕ್ಕೆ ವಾಯುವಿಹಾರಕ್ಕೆ ಬರುತ್ತಿದ್ದರು. ಆಗ ಅಲ್ಲಿ ಕುಳಿತುಕೊಳ್ಳಲು ವ್ಯವಸ್ಥೆಗಳಿರಲಿಲ್ಲ. ಒಂದು ದಿನ ಅವರು ಕುಳಿತಲ್ಲಿಗೆ ಹಾವು ಬಂದಿತ್ತು. ಆ ಘಟನೆ ಬಳಿಕ ಕೆಲವು ಕಡೆ ಗಿಡ ನೆಟ್ಟು ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಕಟ್ಟೆ ನಿರ್ಮಿಸಲಾಗಿದೆ. ನೆಟ್ಟ ಗಿಡಗಳು ಹಲವು ಬಾರಿ ಸತ್ತು ಹೋಗಿದ್ದರೂ ಈಗ ಪ್ರತಿದಿನ ನೀರುಣಿಸುವುದರಿಂದ ಗಿಡಗಳು ಹುಲುಸಾಗಿ ಬೆಳೆಯುತ್ತಿವೆ. ಪುಷ್ಪಾ ಪ್ರಸಾದ್ ಸ್ಮರಣಾರ್ಥ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಈ ಕಟ್ಟೆ ಮೀಸಲಿಡಾಗಿದೆ. ಪ್ರಸ್ತುತ ಐದಾರು ಕಟ್ಟೆಗಳಿವೆ. ಧ್ಯಾನ, ವ್ಯಾಯಾಮ ಮಾಡುವವರಿಗೂ ಇದು ಅನುಕೂಲ.
ಮೇರಿಹಿಲ್ ಹೆಲಿಪ್ಯಾಡ್ ವಾಯು ವಿಹಾರಿಗಳಿಗೆ ಸುಂದರ ತಾಣ. ವಿದ್ಯಾರ್ಥಿಯಾಗಿದ್ದಾಗಲೇ ಈ ಮೈದಾನದಲ್ಲಿ ವ್ಯಾಯಾಮ ಮಾಡುತ್ತಿದ್ದೇನೆ. ಗಿಡಗಳನ್ನು ಸಂರಕ್ಷಿಸಿದಾಗ ಒಳ್ಳೆಯ ಗಾಳಿ ಸಿಗುತ್ತದೆ. ಈ ನಿಟ್ಟಿನಲ್ಲಿ ವಾಯು ವಿಹಾರಕ್ಕೆ ಬರುವ ಸ್ನೇಹಿತರನ್ನು ಜತೆಗೆ ಸೇರಿಸಿಕೊಂಡು ಗಿಡಗಳ ಸಂರಕ್ಷಣೆಗೆ ಹಾಗೂ ವ್ಯಾಯಾಮಕ್ಕೆ ಬೇಕಾದ ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ. ಮುಖ್ಯವಾಗಿ ವಾಹನಗಳು ಮೈದಾನಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ.
ಹರೀಶ್ ಪದವಿನಂಗಡಿ, ಎಎಸ್‌ಐ ಸಿಸಿಬಿ, ಮಂಗಳೂರು