ಶ್ರೀ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಹೊಸ ನಾಟಕ ‘ಜೋಡು ಜೀಟಿಗೆ’ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರಂಗನಿರ್ದೇಶಕಿ ಲಾವಣ್ಯ ವಿಶ್ವಾಸ್‌ದಾಸ್, ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಶ್ರೀ ವಿಶ್ವಾಸ್ ಕುಮಾರ್‌ದಾಸ್ ಮುಂತಾದವರು ಉಪಸ್ಥಿತರಿದ್ದರು. 
ಜಿಲ್ಲೆ

ತುಳು ರಂಗಭೂಮಿಗೆ ಮತ್ತೆ ಪರ್ವಕಾಲ

ಮಂಗಳೂರು: ತುಳು ರಂಗಭೂಮಿಗೆ ಹಾಸ್ಯವೇ ಪ್ರಧಾನ, ಇಲ್ಲದಿದ್ದರೆ ನಾಟಕಕ್ಕೆ ಪ್ರೇಕ್ಷಕರ ಕೊರತೆ ಎಂಬ ಅಪವಾದವಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಈ ಚಿತ್ರಣವೇ ಬದಲಾಗಿದ್ದು, ಒಳ್ಳೆಯ ಪೌರಾಣಿಕ, ಜಾನಪದ ನಾಟಕಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ರಂಗ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಹೇಳಿದರು.

ಶ್ರೀ ಶಿರಿಡಿ ಸಾಯಿಬಾಬಾ ಮಂದಿರ ಆಶ್ರಿತ ಸಾಯಿಶಕ್ತಿ ಕಲಾಬಳಗ ಉರ್ವ ಚಿಲಿಂಬಿ ಇದರ ವತಿಯಿಂದ ಸಾಯಿಬಾಬಾ ಮಂದಿರದಲ್ಲಿ ಹೊಸ ನಾಟಕ ‘ಜೋಡು ಜೀಟಿಗೆ’ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜೋಡು ಜೀಟಿಗೆ’ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕೊಡಿಯಾಲ್‌ಬೈಲ್ ಹರ್ಷ

ತುಳು ರಂಗಭೂಮಿ ಒಂದು ರೀತಿ ಗೊಂದಲ ಸ್ಥಿತಿಯಲ್ಲಿದ್ದಾಗ ರಂಗಭೂಮಿ ಮತ್ತೆ ಗತವೈಭವಕ್ಕೆ ಮರಳಬೇಕೆಂಬುದು ಕಲಾವಿದರ ಆಶಯವಾಗಿತ್ತು. ಅದೇ ಸಂದರ್ಭ ಒಂದರ ಹಿಂದೆ ಒಂದರಂತೆ ಬಂದಂತಹ ಪೌರಾಣಿಕ, ಸಾಮಾಜಿಕ ನಾಟಕಗಳು ಯಶಸ್ವಿಯಾಗಿವೆ. ಈ ಮೂಲಕ ಕಲಾಭಿಮಾನಿಗಳು ಖುಷಿಯಾಗಿದ್ದಾರೆ. ತುಳು ರಂಗಭೂಮಿಗೆ ಮತ್ತೆ ಪರ್ವಕಾಲ ಬಂದಂತಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ರಂಗಭೂಮಿ ಎನ್ನುವುದು ವೃತ್ತಿ, ಉದ್ಯಮವಲ್ಲ, ಕಲಾವಿದರನ್ನು ಸೃಷ್ಟಿಸುವುದರ ಮೂಲಕ ಒಳ್ಳೆಯ ಸಮಾಜವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದರು.

ರಂಗನಿರ್ದೇಶಕಿ, ಸಾಯಿ ಮಂದಿರದ ಟ್ರಸ್ಟಿ ಲಾವಣ್ಯ ವಿಶ್ವಾಸ್‌ದಾಸ್ ಮಾತನಾಡಿ, ಸಾಯಿ ಶಕ್ತಿ ಕಲಾ ಬಳಗದ ‘ಜೋಡು ಜೀಟಿಗೆ’ ನಾಟಕ ಕಲ್ಲುರ್ಟಿ-ಕಲ್ಕುಡ ದೈವದ ಕಥೆಯಾಗಿದ್ದು, ವಿಭಿನ್ನವಾಗಿ ಮೂಡಿ ಬರಲಿದೆ. ಈಗಾಗಲೇ 20ನಾಟಕಗಳು ಬುಕ್ಕಿಂಗ್ ಆಗಿದೆ ಎಂದರು.

ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ಶ್ರೀ ವಿಶ್ವಾಸ್ ಕುಮಾರ್‌ದಾಸ್ ಅಧ್ಯಕ್ಷತೆ ವಹಿಸಿದ್ದರು. ಪಣೋಲಿಬೈಲ್ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ದಿವಾಕರ್ ಮುಗುಳ್ಯ, ಡಾ.ಕವಿತಾ ಐವನ್ ಡಿಸೋಜ, ಸಾಹಿತಿ ಕೀರ್ತನ್ ಭಂಡಾರಿ, ದೀಪಕ್ ಪಿಲಾರ್, ಕಾರ್ಪೊರೇಟರ್ ಕೇಶವ ಭಂಡಾರಿ, ಶೈಲೇಶ್ ಮಲ್ಯ, ದೇವಿಪ್ರಸಾದ್ ಅಜಿಲ ಉಪಸ್ಥಿತರಿದ್ದರು.