ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜೋಡೆತ್ತಿನ ರೈತರ ಸಮಾವೇಶದ ಬಂಡಿ ಮೆರವಣಿಗೆ ಗಮನ ಸೆಳೆಯಿತು.  
ಜಿಲ್ಲೆ

ಜೋಡೆತ್ತಿನ ರೈತರ ಸಮಾವೇಶ, ಜನಾಕರ್ಷಿಸಿದ ಬಂಡಿ ಮೆರವಣಿಗೆ

Vijyapura - Parsuram Bhasagi

ವಿಜಯಪುರ: ಜೋಡೆತ್ತಿನ ರೈತರಿಗೆ ಪ್ರೋತ್ಸಾಹ ಧನ ಜಾರಿಗೊಳಿಸುವ ಮೂಲಕ ಸಾಂಪ್ರದಾಯಿಕ ಕೃಷಿ ಪದ್ಧತಿ ಉಳಿಸಬೇಕೆಂದು ಕಂಚೂರಿನ ಸವಿತಾಪೀಠ ಸಂಸ್ಥಾನದ ಶ್ರೀ ಸವಿತಾನಂದನಾಥ ಮಹಾಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.

ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಜೋಡೆತ್ತಿನ ರೈತರ ಸಮಾವೇಶ ಹಾಗೂ ಪಕ್ಷಾತೀತ ಪತ್ರ ಚಳುವಳಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಸಂಕಲ್ಪ ಶಕ್ತಿಯು ಅದ್ಭುತವಾದ ಕೆಲಸ ಮಾಡಿಸುತ್ತಿದೆ. ನಂದಿ ಕೃಷಿ ಉಳಿಯಬೇಕಾದರೆ ಜೋಡೆತ್ತಿನ ಕೃಷಿಕರ ಬೇಡಿಕೆಗೆ ಶಾಸಕರು ಮೊದಲು ಆದ್ಯತೆ ನೀಡಬೇಕಾಗಿದೆ. ಅಭೀಃ ಫೌಂಡೇಶನ್ ವತಿಯಿಂದ ಜರಗುತ್ತಿರುವ ಜೋಡೆತ್ತಿನ ಕೃಷಿಕರ ಸಂಘಟನೆಗೆ ನಾವು ತನು ಮನ ಧನದಿಂದ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.

ಅಭೀಃ ಫೌಂಡೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಕೃಪೆಯಿಂದ ಅವರ ಜನ್ಮ ಸ್ಥಳದಿಂದ ಜೋಡೆತ್ತಿನ ಕೃಷಿ ಪುನಃಶ್ಚೇತನಕ್ಕಾಗಿ ಪ್ರಾರಂಭವಾದ ನಂದಿ ಯಾತ್ರೆ ಎಂಬ ಅಭಿಯಾನಕ್ಕೆ ಅತೀವ ಬೆಂಬಲ ದೊರೆಯುತ್ತಿದೆ. ನಾವೆಲ್ಲರೂ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಜ್ಞಾನದ ಬಲದಿಂದ ಒಂದುಗೂಡಿ ಸೂಕ್ತ ಯೋಜನೆ ಜಾರಿಗೆ ತರಬೇಕಾಗಿದೆ. ನಾವಿಂದು ಜೋಡೆತ್ತಿನ ಕೃಷಿ ಪುನಶ್ಚೇತನ ಮಾಡದೇ ಇದ್ದರೆ, ಮುಂದೆ ನಮ್ಮ ಮಕ್ಕಳು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ ಎಂದರು.

ಉದ್ದಿಮೆದಾರ ಮಹಾಂತೇಶ ಬಿಜ್ಜರಗಿ ಮಾತನಾಡಿ, ನಂದಿ ಸಂತತಿ ಉಳಿಸುವುದಕ್ಕಿಂತ ದೊಡ್ಡ ಕಾರ್ಯ ಇನ್ನೊಂದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅರವಿಂದ ಕೌಲಗಿ ಮಾತನಾಡಿದರು. ಅಶೋಕ ಮಸಳಿ ನಿರೂಪಿಸಿದರು. ದಾನಯ್ಯ ಮಠಪತಿ, ಪಾಂಡು ಕುಲಕರ್ಣಿ ಮತ್ತಿತರರಿದ್ದರು. ರಾಜು ಅಶೋಕ ಮಸಳಿ ಸ್ವಾಗತಿಸಿದರು.

ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸನ್ಯಾಸಪ್ಪನ ಮಠದವರೆಗೆ ತಳಿರು ತೋರಣದಿಂದ ಸಿಂಗರಿಸಿದ 142 ಎತ್ತಿನ ಬಂಡಿಗಳ ಭವ್ಯ ಮೆರವಣಿಗೆ ನಡೆಯಿತು.