ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಉದ್ಯೋಗ ವಿನಿಯಮ ಕೇಂದ್ರ ಸ್ಥಾಪಿಸಿ ಜಾಬ್ ಕಾರ್ಡ್ ಮಾಡಿಸುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ, ವಿಧಾನ ಪರಿಷತ್‌ನಲ್ಲಿ ‘ವಿಜಯವಾಣಿ’ಯಲ್ಲಿ ಜೂ.18ರಂದು ಪ್ರಕಟವಾಗಿದ್ದ ‘ಉದ್ಯೋಗ ಕಾರ್ಡ್‌ಗೆ ಬೆಂಗಳೂರೇ ಗತಿ’ ವರದಿ ಪ್ರಸ್ತಾಪಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿದ್ಯಾರ್ಥಿಗಳು, ಉದ್ಯೋಗ ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳು ಜಾಬ್ ಕಾರ್ಡ್ ಮಾಡಿಸಲು ಬೆಂಗಳೂರಿಗೆ ಹೋಗಬೇಕಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಗೊಂಡಿದ್ದು, 8 ವರ್ಷಗಳಿಂದ ಜಾರ್ಬ್‌ಕಾರ್ಡ್ ಕೇಂದ್ರ ಉದ್ಘಾಟನೆ ಆಗಿಲ್ಲ. ಆದರಿಂದ ಬೆಂಗಳೂರು ನಗರದಲ್ಲಿ ಇರುವ ಉದ್ಯೋಗ ವಿನಿಮಯ ಕೇಂದ್ರಕ್ಕೆ ಉದ್ಯೋಗ ಆಕಾಂಕ್ಷಿಗಳು ಮತ್ತು ಪದವಿ ವಿದ್ಯಾರ್ಥಿಗಳು ಹೋಗಬೇಕಾಗಿದೆ. ಜಿಲ್ಲೆಯ ಕೈಗಾರಿಕಾ ವಲಯದಲ್ಲಿ ಸಾಕಷ್ಟು ಉದ್ಯೋಗ ಇದ್ದರೂ ಸೇರಲು ಪರದಾಟ ಅನುಭವಿಸಬೇಕಾಗಿದೆ. ಆದರಿಂದ ಇದಕ್ಕೆ ಸರ್ಕಾರ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ರಾಮೋಜಿ ಗೌಡ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳ ಪರದಾಟ:
ಜಿಲ್ಲೆಯ ವಿದ್ಯಾರ್ಥಿಗಳು, ಉದ್ಯೋಗ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಜಾಬ್ ಕಾರ್ಡ್ ಮಾಡಿಸಲು ಬೆಂಗಳೂರನ್ನೇ ಅವಲಂಬಿಸಬೇಕಾಗಿದೆ. ಜಿಲ್ಲೆಯ ಹಲವು ವಿದ್ಯಾರ್ಥಿಗಳು, ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಉದ್ಯೋಗ ಹುಡುಕಾಟ ನಡೆಸುತ್ತಿರುವುದು ಒಂದೆಡೆಯಾದರೆ ಉದ್ಯೋಗದ ಮಾಹಿತಿ ಪಡೆಯಲೂ ಜಿಲ್ಲೆಯಲ್ಲಿ ಅವಕಾಶವಿಲ್ಲದಂತಾಗಿದ್ದು, ಜಾಬ್ಕಾರ್ಡ್‌ಗೆ ಬೆಂಗಳೂರು ಬಸ್ ಹತ್ತುವಂತಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಗೊಂಡು 8 ವರ್ಷಗಳೇ ಕಳೆಯುತ್ತಾ ಬಂದಿದೆ. ಹಲವು ಇಲಾಖೆಗಳು ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯೂ ಇದೇ ಜಿಲ್ಲಾಡಳಿತ ಭವನದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರ ಇಲ್ಲದಿರುವುದೂ ವಿದ್ಯಾರ್ಥಿಗಳ ಪರದಾಟಕ್ಕೆ ಕಾರಣವಾಗಿದೆ.