ಜಿಲ್ಲೆ

ಜಿಪಂ 2 ಗುತ್ತಿಗೆ ಹುದ್ದೆಗೆ 660 ಅರ್ಜಿ!

Dakshina Kannada

ಮಂಗಳೂರು: ಜಿಲ್ಲಾ ಪಂಚಾಯಿತಿಯು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ 13 ಹುದ್ದೆಗಳ ಭರ್ತಿಗಾಗಿ ಕರೆದಿದ್ದ ನೇರ ಸಂದರ್ಶನಕ್ಕೆ 900ಕ್ಕೂ ಅಧಿಕ ಮಂದಿ ಆಗಮಿಸಿದ್ದರು. ಜಿಪಂ ಮಿನಿ ಸಭಾಂಗಣದಲ್ಲಿ ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಗಮಿಸಿದ್ದರಿಂದ ನೇತ್ರಾವತಿ ಸಭಾಂಗಣಕ್ಕೆ ಸ್ಥಳಾಂತರಿಸಲಾಯಿತು. ಬಿಎಸ್ಸಿ/ಬಿಸಿಎ ಅರ್ಹತೆ ಇರುವ ತಾಲೂಕು ಎಂಐಎಸ್ ಸಂಯೋಜಕರ 2 ಹುದ್ದೆಗೆ 133, ಬಿ.ಇ. (ಸಿವಿಲ್) ಅರ್ಹತೆಯ ತಾಂತ್ರಿಕ ಸಂಯೋಜಕರ 2 ಹುದ್ದೆಗೆ 160, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಅರ್ಹತೆಯ ತಾಲೂಕು ಐಇಸಿ ಸಂಯೋಜಕರ 7 ಹುದ್ದೆಗಳಿಗೆ 28 ಮಂದಿ ಅರ್ಜಿ ಸಲ್ಲಿಸಿದ್ದರು. ದ್ವಿತೀಯ ಪಿಯುಸಿ ಅರ್ಹತೆ ಹೊಂದಿದ್ದ ಡಾಟಾ ಎಂಟ್ರಿ ಆಪರೇಟರ್ 2 ಹುದ್ದೆಗಳಿಗೆ 660ರಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಉದ್ಯೋಗಾಕಾಂಕ್ಷಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡುತ್ತೇವೆ. - ಡಾ.ಸೆಲ್ವಮಣಿ ಆರ್, ಸಿಇಒ ಜಿ.ಪಂ.