ಜಿಲ್ಲೆ

ಉದ್ಯೋಗಾಕಾಂಕ್ಷಿಗಳಿಗೆ ಕೌಶಲ ತರಬೇತಿ ಅಗತ್ಯ

ಮರಿದೇವ ಹೂಗಾರ

ಹುಬ್ಬಳ್ಳಿ: ಇಲ್ಲಿಯ ತಾರಿಹಾಳ ಕೈಗಾರಿಕಾ ಪ್ರದೇಶದ ಇನ್ಸ್‌ಟ್ಯೂಟ್ ಆಫ್ ಎಕ್ಸ್‌ಲೆನ್ಸ್ ಇನ್ ಮ್ಯಾನೇಜ್‌ಮೆಂಟ್ ಸೈನ್ಸ್ ಕ್ಯಾಂಪಸ್‌ನಲ್ಲಿ ಮೈ ನೌಕ್ರಿ ಡಾಟ್ ಕಾಮ್ ಸಹಯೋಗದೊಂದಿಗೆ ಭಾನುವಾರ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು.

ಬೆಂಗಳೂರಿನ ಎಸ್‌ವಿ ನೇಮಕಾತಿ ಸಂಸ್ಥೆಯ ನಿರ್ದೇಶಕ ಜೀವನಕುಮಾರ್ ಎಸ್. ಉದ್ಘಾಟಿಸಿ ಮಾತನಾಡಿ, ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಕೌಶಲ ತರಬೇತಿ ಅತ್ಯಗತ್ಯ. ಕೌಶಲ ಹೊಂದಿದ್ದರೆ ಉನ್ನತ ಹುದ್ದೆ ಅಲಂಕರಿಸಬಹುದು ಎಂದರು.

ಪ್ರೆಸುಲ್ ಇನ್ಫೋಟೆಕ್ ಸಿಇಒ ಪ್ರವೀಣ ಮಾತನಾಡಿ, ಕಂಪನಿಯ ಇಚ್ಛೆ ಅರಿತು ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ. ಮಾತನಾಡಿ, ಆಡಳಿತ ಮಂಡಳಿ ಅಧ್ಯಕ್ಷ ಡಾ.ಎನ್.ಎ. ಚರಂತಿಮಠ ಅವರ ಬೆಂಬಲದಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

35 ಕಂಪನಿಗಳು ಮತ್ತು 600 ವಿದ್ಯಾರ್ಥಿಗಳು ಭಾಗವಹಿಸಿದ್ದರು. 250 ಅಭ್ಯರ್ಥಿಗಳಿಗೆ ಆಫರ್ ಲೆಟರ್ ನೀಡಲಾಯಿತು.

ಸಂಸ್ಥೆಯ ತರಬೇತಿ ಮತ್ತು ಉದ್ಯೋಗಾಧಿಕಾರಿ ಡಾ. ದೀಪಕ ಎಂ.ಪಿ. ಸಂಯೋಜಿಸಿದ್ದರು.