ಜಿಲ್ಲೆ

ಉದ್ಯೋಗಕ್ಕಾಗಿ ಶಿಕ್ಷಣ ಆತಂಕಕಾರಿ ಬೆಳವಣಿಗೆ: ನಿರಂಜನ ವಾನಳ್ಳಿ

ಗೋಪಾಲಕೃಷ್ಣ ಪಾದೂರ್

ಉಡುಪಿ: ರಾಜ್ಯದಲ್ಲಿ ಈ ವರ್ಷ ಬಿ.ಕಾಂ ಮತ್ತು ಬಿಸಿಎ ಕೋರ್ಸ್‌ಗಳಿಗೆ ವಿಪರೀತ ಬೇಡಿಕೆ ಬಂದಿದೆ. ವಿದ್ಯಾರ್ಥಿಗಳು ಅನ್ನದ ದಾರಿಯನ್ನು ಆರಿಸಿಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟ. ಅನೇಕ ವಿವಿಗಳಲ್ಲಿ ಬಹುಮುಖ್ಯ ವಿಭಾಗಗಳಿಗೆ ಬಾಗಿಲು ಹಾಕುವಂತಾಗಿರುವುದು ದೌರ್ಭಾಗ್ಯ. ಉದ್ಯೋಗಕ್ಕಾಗಿ ಶಿಕ್ಷಣ ಎಂಬುದು ಆತಂಕಕಾರಿ ಸಂಗತಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಉಪಕುಲಪತಿ ಡಾ. ನಿರಂಜನ್ ವಾನಳ್ಳಿ ಹೇಳಿದರು.

ಬುಧವಾರ ಎಂಜಿಎಂ ಕಾಲೇಜು ವಾರ್ಷಿಕೋತ್ಸವ ಹಾಗೂ ಸಂಸ್ಥಾಪಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಮೈಸೂರು ವಿವಿಯಲ್ಲಿ ಸಂಸ್ಕೃತ, ಇತಿಹಾಸ, ಫಿಲಾಸಫಿ ಮುಂತಾದ ವಿಭಾಗಗಳಿಗೆ ವಿದ್ಯಾರ್ಥಿಗಳಿಲ್ಲ. 4-5 ವರ್ಷದ ಹಿಂದೆ ಇಂಜಿನಿಯರಿಂಗ್ ಕೋರ್ಸ್‌ಗೆ ಇದೇ ಪರಿಸ್ಥಿತಿ ಇತ್ತು. ಆದರೆ ಈಗ ಕ್ಯಾಂಪಸ್ ನೇಮಕಾತಿ ಆಗದಿದ್ದರೆ ಬಿಇ ಪದವಿಗಿಂತ ಬಿಎ ಪದವಿ ವಾಸಿ ಎಂದು ಹೇಳಿದರು.

ಕಾಲೇಜುಗಳು ಸಂಕ್ರಮಣ ವ್ಯವಸ್ಥೆಯಲ್ಲಿದ್ದು, ಹೊಸ ಶಿಕ್ಷಣ ನೀತಿ ಸಮರ್ಪಕವಾಗಿ ಜಾರಿ ಮಾಡುವ ನಿರ್ಣಾಯಕ ಕಾಲಘಟ್ಟದಲ್ಲಿವೆ. ಎನ್‌ಇಪಿಯಿಂದಾಗಿ ಅನ್ನದ ದಾರಿಗೆ ಸಹಕಾರವಾಗಲಿದೆ. ಸರ್ಕಾರ ಮತ್ತು ಕಾಲೇಜುಗಳು ಪೂರ್ಣಪ್ರಮಾಣದಲ್ಲಿ ಜಾರಿಗೆ ತಂದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭವಾಗಲಿದೆ ಎಂದರು.

ಮಾಹೆ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ್ ನಾಯ್ಕ, ಪಪೂ ಕಾಲೇಜು ಪ್ರಾಂಶುಪಾಲೆ ಡಾ. ಮಾಲತಿ ದೇವಿ, ಎಂಜಿಎಂ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜೆ.ಪಿ. ರಾವ್ ಉಪಸ್ಥಿತರಿದ್ದರು.