ಜಿಲ್ಲೆ

ಜಿದ್ದಾದಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ

ಮಂಗಳೂರು: ಜಿದ್ದಾದಲ್ಲಿ ಕೆಲಸ, ವೀಸಾ ಕೊಡಿಸುವುದಾಗಿ ಹೇಳಿ ಸುಮಾರು 4 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.


ಮೊಹಮ್ಮದ್ ಶಮ್ಲಾನ್ ಆಲಿ ಆರೋಪಿ. ಅಸ್ತರ್ ಆಲಿ ವಂಚನೆಗೊಳಗಾದವರು. 3 ಲಕ್ಷ ರೂ. ನೀಡಿದರೆ ಜಿದ್ದಾದಲ್ಲಿ ಲೈನ್‌ಸೇಲ್ ಸಂಸ್ಥೆಯಲ್ಲಿ 1 ಲಕ್ಷಕ್ಕೂ ಅಧಿಕ ವೇತನ ಸಿಗುವ ಕೆಲಸ ಕೊಡಿಸುವುದಾಗಿಯೂ, ವೀಸಾ ಮತ್ತು ಟಿಕೆಟ್ ಕಳುಹಿಸುವುದಾಗಿಯೂ ಮೊಹಮ್ಮದ್ ಶಮ್ಲಾನ್ ಹೇಳಿದ್ದ. ಆತನ ಮಾತು ನಂಬಿ ಅಸ್ತರ್ ಆಲಿ ತನ್ನ ಚಿನ್ನಾಭರಣ ಮಾರಾಟ ಮಾಡಿ ಆ.9ರಂದು 2 ಲಕ್ಷ ರೂ. ನೀಡಿದ್ದರು. ಬಳಿಕ ಆರೋಪಿ ಮೊಹಮ್ಮದ್ ಶಮ್ಲಾನ್ ಜಿದ್ದಾಗೆ ಹೋಗಿ ಮತ್ತೆ 1 ಲಕ್ಷ ರೂ. ನೀಡುವಂತೆ ಹೇಳಿದ್ದ. ಅದರಂತೆ ಅಸ್ತರ್ ಆಲಿ ಸಾಲ ಪಡೆದು 1 ಲಕ್ಷ ರೂ. ನೀಡಿದ್ದರು. ಆದರೆ 1 ತಿಂಗಳಾದರೂ ಟಿಕೆಟ್ ಮತ್ತು ವೀಸಾ ಕಳುಹಿಸಿರಲಿಲ್ಲ. ಕರೆ ಮಾಡಿದಾಗ ಜಿದ್ದಾಗೆ ಬರುವಂತೆ ತಿಳಿಸಿದ್ದ.

ಸೆ.12ರಂದು 20,300 ರೂ. ಖರ್ಚು ಮಾಡಿ ಜಿದ್ದಾಗೆ ಹೋದಾಗ ಅಲ್ಲಿ ಕೆಲಸ ಕೊಡದೆ ರೂಮ್‌ನಲ್ಲಿ ಕೂಡಿ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ರೂಮಿನಿಂದ ಹೊರಗೆ ಹೋದರೆ 10 ವರ್ಷ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಬಳಿಕ ವಾಪಸ್ ಕಳುಹಿಸುವಂತೆ ಕೇಳಿಕೊಂಡಾಗ ಆರೋಪಿ ಮೊಹಮ್ಮದ್ ಶಮ್ಲಾನ್ 69,000 ರೂ. ಪಡೆದುಕೊಂಡಿದ್ದಾನೆ ಎಂಬುದಾಗಿ ಪ್ರಕರಣ ದಾಖಲಾಗಿದೆ.