ಉಡುಪಿ: ಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ವೇಗವಾಗಿ ಪ್ರಗತಿ ಹೊಂದುತ್ತಿದ್ದು, ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಈ ಪ್ರತಿಭಾವಂತರಿಗೆ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಪ್ರಭಾಕರ್ ಪೂಜಾರಿ ಹೇಳಿದರು.
ಬನ್ನಂಜೆ ನಾರಾಯಣ ಗುರು ಸಭಾಂಗಣದಲ್ಲಿ ಮಂಗಳವಾರ ನಗರಸಭೆ ಹಾಗೂ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರ ಬಿಲ್ಲಾಡಿ ಪ್ರಾಯೋಜಕತ್ವದಲ್ಲಿ ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್, ಬಿಲ್ಲವ ಸೇವಾ ಸಂಘ ಬನ್ನಂಜೆ ಸಹಕಾರದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಪದವೀಧರರು ಉನ್ನತ ಹುದ್ದೆಗಳ ಆಕಾಂಕ್ಷೆಯೊಂದಿಗೆ ದೇಶದ ವಿವಿಧ ಭಾಗಗಳಿಗೆ ಹಾಗೂ ವಿದೇಶಗಳಿಗೆ ತೆರಳುತ್ತಿದ್ದಾರೆ. ಈ ವಲಸೆಯನ್ನು ತಪ್ಪಿಸಿ ಜಿಲ್ಲೆಯಲ್ಲಿಯೇ ಉಳಿಸಿಕೊಳ್ಳುವುದು ಹಾಗೂ ಯುವಜನತೆ ಕುಟುಂಬದೊಂದಿಗೆ ವಾಸಿಸಲು ಪ್ರೋತ್ಸಾಹಿಸುವ ಮಹತ್ವಕಾಂಕ್ಷೆಯೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.
ಆತ್ಮಾನಂದ ಸಂಸ್ಥೆಯ ಪ್ರಾಚಾರ್ಯ ರೂಪೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆಯ ಉಪಾಧ್ಯೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಸುಂದರ್ ಜಿ. ಕಲ್ಮಾಡಿ, ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಸ್ಥಳಿಯ ನಗರಸಭಾ ಸದಸ್ಯೆ ಸವಿತಾ ಹರೀಶರಾಮ್, ಉದ್ಯೋಗ ಮೇಳದ ಸಂಯೋಜಕರಾದ ಓಬ ಪೂಜಾರಿ, ಪ್ರಮೋದ್ ಕರ್ಕೇರಾ, ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು, ಭಾಸ್ಕರ್ ಸುವರ್ಣ, ಉದ್ಯಮಿ ದಿನೇಶ್ ಅಮೀನ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ನಗರಸಭೆಯ ಅಧಿಕಾರಿಗಳಾದ ನಾರಾಯಣ್ ಎಸ್., ಎಸ್.ಮನೋಹರ್, ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು. ಉದ್ಯೋಗ ಮೇಳದಲ್ಲಿ ಸುಮಾರು 60 ಕಂಪನಿಗಳು ಹಾಗೂ ಎರಡು ಸಾವಿರಕ್ಕೂ ಮಿಕ್ಕಿ ಉದ್ಯೋಗಕಾಂಕ್ಷಿಗಳು ಭಾಗವಹಿಸಿದ್ದರು.