ಜಿಲ್ಲಾಮಟ್ಟದ ಮೇಳ 
ಜಿಲ್ಲೆ

ನಿರುದ್ಯೋಗಿಗಳಿಗೆ ಉದ್ಯೋಗ ಪರ್ವ

ಶಿವರಾಜ.ಎಂ

ಸೆ.13ರಂದು ಜಿಲ್ಲಾಮಟ್ಟದ ಮೇಳಕ್ಕೆ ಜಿಲ್ಲಾಡಳಿತ ತಯಾರಿ100ಕ್ಕೂ ಹೆಚ್ಚು ಕಂಪನಿಗಳು ಭಾಗಿ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಗ್ರಾಮೀಣ ಭಾಗದ ವಿದ್ಯಾವಂತ ನಿರುದ್ಯೋಗ ಯುವತಿ-ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಯುವಜನತೆಯ ನಿರುದ್ಯೋಗ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬೃಹತ್ ಉದ್ಯೋಗ ಮೇಳಕ್ಕೆ ಸಜ್ಜಾಗಿದ್ದು, ವಿದ್ಯಾವಂಥ ಯುವಜನರಲ್ಲಿ ನಿರೀಕ್ಷೆ ಗರಿಗೆದರಿದೆ.
ಶಾಲಾ ಕಾಲೇಜು ಹಂತಗಳಲ್ಲಿ ತೇರ್ಗಡೆಯಾಗಿ, ವಿವಿಧ ಕೋರ್ಸ್‌ಗಳನ್ನು ಮುಗಿಸಿ ಸರಿಯಾದ ಉದ್ಯೋಗ ದೊರಕದೆ ಖಿನ್ನತೆಗೆ ಒಳಗಾಗಿರುವ ಹಲವರಿಗೆ ಈ ಉದ್ಯೋಗ ಮೇಳ ಎನರ್ಜಿ ಟಾನಿಕ್ ಆಗಲಿದೆ ಎಂಬ ಆಶಾಕಿರಣ ಮೊಳಕೆಯೊಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಕೌಶಲ ಮಿಷನ್ ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, 100ಕ್ಕೂ ಹೆಚ್ಚು ಕಂಪನಿಗಳ ಉದ್ಯೋಗದಾತರು ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಳೆದೊಂದು ತಿಂಗಳಿಂದಲೇ ತಾಲೀಮು ಆರಂಭಿಸಿರುವ ಜಿಲ್ಲಾಡಳಿತ ವಿವಿಧ ಕಂಪನಿಗಳಿಗೆ ಆಹ್ವಾನ ನೀಡುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಈ ಮೇಳದ ಮೂಲಕ ಉದ್ಯೋಗ ಭದ್ರತೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಶ್ರಮಪಡುತ್ತಿದ್ದಾರೆ.
ಎಸ್ಸೆಸ್ಸೆಲ್ಸಿಯಿಂದ ಪದವಿವರೆಗೆ: ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳದಲ್ಲಿ 100 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲ್ಲಿದ್ದು, ತಮ್ಮಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲಮಾ, ಇಂಜಿನಿಯರಿಂಗ್, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ಮತ್ತು ವಿವಿಧ ತರಬೇತಿ ಸಂಸ್ಥೆಗಳಲ್ಲಿ ಕೌಶಲ ತರಬೇತಿ ಪಡೆದ ಅಭ್ಯರ್ಥಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಬಹುದಾಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ಸಾಕಷ್ಟು ಕೌಶಲ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು ಇಂಥಹವರಿಗೆ ಈ ಮೇಳ ಸಾಕಷ್ಟು ಸಹಕಾರಿಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಿ:
ಉದ್ಯೋಗಮೇಳದಲ್ಲಿ ಭಾಗವಹಿಸುವ ಉದ್ಯೋಗಕಾಂಕ್ಷಿಗಳು ಠಿಠಿ://ಚಿಚ್ಞಜಚ್ಝಟ್ಟಛ್ಟ್ಠ್ಟಿಚ್ಝ.್ಞಜ್ಚಿ.ಜ್ಞಿ/ಛ್ಞಿ/್ಜಟಚ್ಛಿಜ್ಟಿ/5 5 ನೋಂದಾಯಿಸಿಕೊಳ್ಳಬಹುದು. ಉದ್ಯೋಗಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವಂತಿಲ್ಲ. ಅಭ್ಯರ್ಥಿಗಳು ಹತ್ತಿರದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ತಾಲೂಕು ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಿಯೂಅರ್ಜಿ ಸಲ್ಲಿಸಬಹುದಾಗಿದೆ.ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳದ ಉದ್ಯೋಗಕಾಂಕ್ಷಿಗಳು, ಉದ್ಯೋಗಮೇಳ ನಡೆಯುವ ಸ್ಥಳದಲ್ಲಿಯೇ ಅಭ್ಯರ್ಥಿಗಳ ನೋಂದಣಿ ಕೌಂಟರ್‌ಗಳಲ್ಲಿಯೂ ಹೆಸರನ್ನು ನೋಂದಾಯಿಸಿಕೊಂಡು ಭಾಗವಹಿಸಬಹುದಾಗಿರುತ್ತದೆ.
ಎಲ್ಲಿ ಯಾವಾಗ? ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಸೆ.13ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮೇಳ ನಡೆಯಲಿದ್ದು, ಭಾಗವಹಿಸುವ ಅಭ್ಯರ್ಥಿಗಳು ಬಯೋಡಾಟ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸ್ಥಳೀಯವಾಗಿ ಉದ್ಯೋಗ ಲಭ್ಯ: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಬಾಶೆಟ್ಟಿಹಳ್ಳಿ ಕೈಗಾರಿಕಾ ವಲಯ, ನೆಲಮಂಗಲ ತಾಲೂಕು ದಾಬಸ್‌ಪೇಟೆ ಕೈಗಾರಿಕಾವಲಯ ಹಾಗೂ ಹೊಸಕೋಟೆ ತಾಲೂಕಿನ ಕೈಗಾರಿಕಾ ಪ್ರದೇಶಗಳಲ್ಲಿನ ಹಲವು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯವಾಗಿಯೇ ಉದ್ಯೋಗ ದೊರೆತರೆ ಜಿಲ್ಲೆಯ ನಿರುದ್ಯೋಗಿಗಳಿಗೆ ಸಹಕಾರಿಯಾಗಲಿದೆ ಎಂಬ ಆಶಾಭಾವ ವ್ಯಕ್ತವಾಗಿದೆ.

ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆ.15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಉದ್ಯೋಗಕಾಂಕ್ಷಿಗಳ ಮತ್ತು ಉದ್ಯೋಗದಾತರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಜಿಲ್ಲಾಮಟ್ಟದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲು ಜಿಲ್ಲಾಡಳಿತದಿಂದ ಸಾಕಷ್ಟು ಶ್ರಮವಹಿಸಲಾಗುತ್ತಿದೆ. ನೂರಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ, ಈ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುತ್ತಿದ್ದು ವಿವಿಧ ಕಂಪನಿಗಳನ್ನು ಆಹ್ವಾನಿಸುವ ಕೆಲಸ ನಡೆಯುತ್ತಿದೆ.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ