ಜಿಲ್ಲೆ

ಕೌಶಲ್ಯತೆ ಜತೆಗೆ ನೈಪುಣ್ಯತೆ ಕಲಿಯಿರಿ

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಉದ್ಯೋಗ ಕ್ಷೇತ್ರದಲ್ಲಿನ ಪೈಪೋಟಿ ಗಮನದಲ್ಲಿರಿಸಿಕೊಂಡು ಯುವಜನತೆ ತಮ್ಮ ಕ್ರಿಯಾಶೀಲತೆ, ನೈಪುಣ್ಯತೆ ಹಾಗೂ ಸಂವಹನ ಕಲೆಯನ್ನು ಅಳವಡಿಸಿಕೊಳ್ಳುವಂತೆ ಬಾಸ್​ ಸಂಸ್ಥೆಯ ಸಿಎಸ್​ಆರ್​ ವಿಭಾಗದ ಮುಖ್ಯಸ್ಥೆ ಸಾಕಿನ ಬಕ್ಕರ್​ ಹೇಳಿದರು.

ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಹೇ ಮತ್ತು ಬಾಸ್​ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗ ಮೇಳದಂತಹ ಸಮಾಜಮುಖಿ ಕಾರ್ಯಕ್ರಮಗಳು ಅತ್ಯಂತ ಪ್ರಶಂಸನೀಯ ಕಾರ್ಯ. ವಿುಲ ಉದ್ಯೋಗ ಅವಕಾಶಗಳ ಮಾಹಿತಿಯು ಈ ಮೇಳಗಳಲ್ಲಿ ಯುವಜನತೆಗೆ ಸಿಗಲಿದೆ ಎಂದರು.

ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶಗಳು ಸಾಕಷ್ಟಿದೆ. ಈ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ಜೀವನವನ್ನು ಉತ್ತಮಗೊಳಿಸಿಕೊಳ್ಳಿ ಎಂದು ಹೇಳಿದರು.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಹೊಂದಾಣಿಕೆಯನ್ನು ಮಾಡಿಕೊಂಡಾಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಉಳಿದುಕೊಳ್ಳಬಹುದು. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಕಷ್ಟು ಉದ್ಯೋಗವಕಾಶಗಳು ಇವೆ. ಆದರೆ ಈ ಉದ್ಯೋಗಕ್ಕೆ ಬೇಕಾದ ಕೌಶಲ್ಯ ಉಳ್ಳವರು ಕಡಿಮೆಯಾಗುತ್ತಿದ್ದು ನೈಪುಣ್ಯತೆ, ಕೌಶಲ್ಯವನ್ನು ರೂಢಿಸಿಕೊಂಡಿದ್ದೇ ಆದಲ್ಲಿ ಬೇಡಿಕೆ ಹೆಚ್ಚಲಿದೆ ಎಂದು ಸಾಹೇ ಕುಲಸಚಿವ ಡಾ. ಅಶೋಕ್​ ಮೆಹ್ತಾ ತಿಳಿಸಿದರು.

ಎಸ್​ ಎಸ್​ ಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್​. ರವಿಪ್ರಕಾಶ್​, ಉದ್ಯೋಗ ಮೇಳದ ಆಯೋಜಕ ಡಾ. ಶ್ರೀನಿಧಿ, ಉದ್ಯೋಗಾಧಿಕಾರಿಗಳಾದ ಡಾ. ಕಲೀಮ್​, ಡಾ. ಹರೀಶ್​ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 1500 ಉದ್ಯೋಗಾಂಕ್ಷಿಗಳು ಮತ್ತು ವಿವಿಧ ಕಂಪನಿಯ 66 ಉದ್ಯೋಗಪತಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಸುಮಾರು 160 ಉದ್ಯೋಗಾಂಕ್ಷಿಗಳಿಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಲಿಕ್ಕೆ ಅಂತಿಮಗೊಳಿಸಿ, ಆಯ್ಕೆ ಪಟ್ಟಿ ಪ್ರಕಟಿಸಲಾಯಿತು.